ADVERTISEMENT

Covid-19 India Update: ಸಂಸತ್ ಅಧಿವೇಶನಕ್ಕೂ ಮುನ್ನ ಕೊರೊನಾ ಪರೀಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2020, 16:25 IST
Last Updated 28 ಆಗಸ್ಟ್ 2020, 16:25 IST
   

ಸೆ.14ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನ ಅರಂಭವಾಗುವ 72 ಗಂಟೆಗಳಿಗೂ ಮೊದಲು ಎಲ್ಲ ಸಂಸದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದಾರೆ.

ದೆಹಲಿ ಸರ್ಕಾರದ ಅಧಿಕಾರಿಗಳು, ಐಸಿಎಂಆರ್, ಏಮ್ಸ್‌, ಡಿಆರ್‌ಡಿಒ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಈ ಬಾರಿ ಯಾರನ್ನೂ ಮುಟ್ಟದೆ ಭದ್ರತಾ ತಪಾಸಣೆ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಕಳೆದ 24 ಗಂಟೆಗಳಲ್ಲಿ 77,266 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 33,87,500ಕ್ಕೆ ಏರಿಕೆಯಾದಂತೆ ಆಗಿದೆ. ಸಾವಿನ ಸಂಖ್ಯೆ 61,529ಕ್ಕೆ ಮುಟ್ಟಿದೆ. ಸತತ ಎರಡನೇ ದಿನ ಸುಮಾರು 9 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಈವರೆಗೆ ಪರೀಕ್ಷೆ ಮಾಡಿದ ಒಟ್ಟು ಮಾದರಿಗಳ ಸಂಖ್ಯೆ 4 ಕೋಟಿಗೆ ಮುಟ್ಟಿದೆ.

ADVERTISEMENT

ಹರ್ಯಾಣ ಸರ್ಕಾರವು ಮತ್ತೆ ನಿರ್ಬಂಧಗಳನ್ನು ಬಿಗಿ ಮಾಡಿದೆ. ಮುಂದಿನ ಆದೇಶದವರೆಗೂ ಅಂಗಡಿಗಳು, ಮಾಲ್‌ಗಳು ಮತ್ತು ಕಚೇರಿಗಳು ಬಾಗಿಲು ತೆರೆಯುವಂತಿಲ್ಲ ಎಂದು ಸೂಚಿಸಿದೆ. ವಾರಾಂತ್ಯ ಲಾಕ್‌ಡೌನ್ ಮತ್ತೆ ಜಾರಿಗೊಳಿಸಿದ ಒಂದು ವಾರದ ನಂತರ ಸರ್ಕಾರ ಮೇಲಿನಂತೆ ಆದೇಶ ಹೊರಡಿಸಿದೆ.

ಆಗಸ್ಟ್‌ ತಿಂಗಳ ಬಹುತೇಕ ದಿನಗಳಲ್ಲಿ ಭಾರತದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಒಂದು ದಿನದಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ದೇಶಗಳಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಪ್ರಮಾಣಕ್ಕಿಂತಲೂ ಭಾರತದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ವಿಶ್ವದ ವಿವಿಧೆಡೆ ಈವರೆಗೆ 2.4 ಕೋಟಿ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 8,30,205 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.