ADVERTISEMENT

ದೆಹಲಿ | ಆಮ್ಲಜನಕ ಕೊರತೆ: ನಿಲ್ಲದ ಸಾವಿನ ಸರಣಿ ‌

ಎಲ್ಲೆಡೆ ಆಮ್ಲಜನಕಕ್ಕೆ ಹಾಹಾಕಾರ; ಜೀವವಾಯು ಒದಗಿಸಲು ಸರ್ಕಾರಗಳು, ಆಸ್ಪತ್ರೆಗಳ ಪರದಾಟ

ಪಿಟಿಐ
Published 24 ಏಪ್ರಿಲ್ 2021, 21:08 IST
Last Updated 24 ಏಪ್ರಿಲ್ 2021, 21:08 IST
ಖಾಲಿಯಾಗಿರುವ ಆಮ್ಲಜನಕದ ಸಿಲಿಂಡರ್‌ಗಳನ್ನು ತುಂಬಿಸಲು ಕಾನ್ಪುರದ ಆಮ್ಲಜನಕ ಫಿಲ್ಲಿಂಗ್ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿರುವ ಕೋವಿಡ್‌ ರೋಗಿಗಳ ಸಂಬಂಧಿಕರು –ಪಿಟಿಐ ಚಿತ್ರ
ಖಾಲಿಯಾಗಿರುವ ಆಮ್ಲಜನಕದ ಸಿಲಿಂಡರ್‌ಗಳನ್ನು ತುಂಬಿಸಲು ಕಾನ್ಪುರದ ಆಮ್ಲಜನಕ ಫಿಲ್ಲಿಂಗ್ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿರುವ ಕೋವಿಡ್‌ ರೋಗಿಗಳ ಸಂಬಂಧಿಕರು –ಪಿಟಿಐ ಚಿತ್ರ   

ನವದೆಹಲಿ: ಸೂಕ್ತ ಸಮಯಕ್ಕೆ ಆಮ್ಲಜನಕ ಸಿಗದೇ ರೋಗಿಗಳು ಮೃತಪಟ್ಟ ಘಟನೆಗಳು ಶನಿವಾರವೂ ನಡೆದಿವೆ. ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ನಿಗದಿತ ಸಮಯಕ್ಕೆ ಆಮ್ಲಜನಕ ಸಿಗದೇ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ.

‘ಆಮ್ಲಜನಕದ ದಾಸ್ತಾನು ಮುಗಿದ ಕಾರಣ, ಕಳೆದ ರಾತ್ರಿಯಿಂದ ಬೆಳಗಿನವರೆಗೆ ಸುಮಾರು 20 ರೋಗಿಗಳು ಮೃತಪಟ್ಟಿದ್ದಾರೆ’ ಎಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಜೈಪುರ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಿ.ಕೆ. ಬಲುಜಾ ತಿಳಿಸಿದ್ದಾರೆ.

‘ಬೆಳಿಗ್ಗೆ 10.45ರ ಹೊತ್ತಿಗೆಆಸ್ಪತ್ರೆಯಲ್ಲಿ 200 ರೋಗಿಗಳಿದ್ದರು. ಆ ಸಮಯದಲ್ಲಿ ಅರ್ಧಗಂಟೆಗೆ ಸಾಕಾಗುವಷ್ಟು ಆಮ್ಲಜನಕ ಮಾತ್ರ ಇತ್ತು. ಆಸ್ಪತ್ರೆಯಲ್ಲಿರುವ ಶೇ 80ರಷ್ಟು ರೋಗಿಗಳು ಆಮ್ಲಜನಕದ ಆಸರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 35 ರೋಗಿಗಳು ಐಸಿಯುನಲ್ಲಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ಅಮೃತಸರದಲ್ಲಿ 6 ರೋಗಿಗಳ ಸಾವು: ಅಮೃತಸರದಲ್ಲಿ ಆಮ್ಲ ಜನಕದ ಕೊರತೆಯಿಂದ ಆರು ರೋಗಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಮೃತರ ಪೈಕಿ ಐವರು ಕೋವಿಡ್ ರೋಗಿಗಳು ಎನ್ನಲಾಗಿದೆ.

‘ಜಿಲ್ಲಾಡಳಿತವು ಪದೇ ಪದೇ ಸಹಾಯ ಕೇಳುತ್ತಿದ್ದರೂ, ನೆರವಿಗೆ ಯಾರೂ ಮುಂದಾಗಲಿಲ್ಲ’ ಎಂದು ನೀಲಕಾಂತ್ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುನಿಲ್ ದೇವಗನ್ ಆರೋಪಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಒ.ಪಿ. ಸೋನಿ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ‘ಆಮ್ಲಜನಕದ ಕೊರತೆಯ ವಿಚಾರವಾಗಿ ಆಸ್ಪತ್ರೆಯಿಂದ ಮಾಹಿತಿ ನೀಡಿರಲಿಲ್ಲ. ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಒಂದು ಸಂದೇಶ ಕಳುಹಿಸಿ ಸುಮ್ಮನಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಆಮ್ಲಜನಕ ಕೊರತೆ ಇರುವ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸುವಂತೆ ಸರ್ಕಾರ ನೀಡಿದ್ದ ಸೂಚನೆಯನ್ನು ನೀಲಕಾಂತ್ ಆಸ್ಪತ್ರೆ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಇಬ್ಬರ ಸಾವು: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಕೊಳವೆಯನ್ನು ಅಪರಿಚಿತರು ಬಂದ್ ಮಾಡಿದ್ದರಿಂದ ಇಬ್ಬರುಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆನಡೆದಿದೆ.

ಇಬ್ಬರ ಪೈಕಿ ಒಬ್ಬ ರೋಗಿಗೆ ಮಾತ್ರ ಆಮ್ಲಜನಕ ಪೂರೈಸಲಾಗುತ್ತಿತ್ತುಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ, ರೋಗಿಗಳಿಬ್ಬರೂ ಆಮ್ಲಜನಕದ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತರ ಸಂಬಂಧಿಕರು ಹೇಳಿದ್ದಾರೆ.

ಕೋವಿಡ್ ಸುನಾಮಿ ಎದುರಿಸಲು ಸಿದ್ಧರಾಗಿ: ಹೈಕೋರ್ಟ್
ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ‘ಸುನಾಮಿ’ಗೆ ಹೋಲಿಸಿರುವ ದೆಹಲಿ ಹೈಕೋರ್ಟ್, ಮೇ ತಿಂಗಳ ಮಧ್ಯಭಾಗದಲ್ಲಿ ಎದುರಾಗಲಿರುವ ನಿರೀಕ್ಷಿತ ಎರಡನೇ ಅಲೆಯ ಹೊಡೆತ ಎದುರಿಸಲು ಸಿದ್ಧರಾಗುವಂತೆ ಕೇಂದ್ರ ಸರ್ಕಾರಕ್ಕೆ ಶನಿವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬಿಕ್ಕಟ್ಟಿನ ಕುರಿತು ಚರ್ಚಿಸಿತು.

‘ನಾವಿದನ್ನು ಅಲೆ ಎಂದು ಕರೆಯುತ್ತೇವೆ. ಆದರೆ ನಿಜಕ್ಕೂ ಇದು ಸುನಾಮಿ. ಮೇ ಮಧ್ಯಭಾಗದಲ್ಲಿ ಅತಿಹೆಚ್ಚು ಬಾಧಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆ, ಮೂಲಸೌಕರ್ಯ, ಆರೋಗ್ಯ ಸಿಬ್ಬಂದಿ, ಔಷಧ, ಲಸಿಕೆ, ಆಮ್ಲಜನಕವನ್ನು ಸಿದ್ಧವಾಗಿ ಇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿತು.

ಆಮ್ಲಜನಕ ಪೂರೈಕೆ ಹಾಗೂ ಉತ್ಪಾದನೆಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್
‘ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಯಾವೊಬ್ಬ ವ್ಯಕ್ತಿಯೂ ಆಮ್ಲಜನಕ ಪೂರೈಕೆಗೆ ತಡೆ ಒಡ್ಡುವಂತಿಲ್ಲ. ಒಂದು ವೇಳೆ ತಡೆದರೆ ಆ ವ್ಯಕ್ತಿಯನ್ನು ಗಲ್ಲಿಗೇರಿಸಲಾಗುತ್ತದೆ’ ಎಂದು ದೆಹಲಿ ಹೈಕೋರ್ಟ್ ಖಾರವಾಗಿ ನುಡಿದಿದೆ.

ಆಮ್ಲಜನಕದ ಕೊರತೆ ಕುರಿತು ಮಹಾರಾಜ ಅಗ್ರಸೇನ್ ಆಸ್ಪತ್ರೆ,ಜೈಪುರ ಗೋಲ್ಡನ್ ಆಸ್ಪತ್ರೆ, ಬಾತ್ರಾ ಆಸ್ಪತ್ರೆ ಮತ್ತು ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಶನಿವಾರ ವಿಚಾರಣೆ ನಡೆಸಿತು.

ಆಮ್ಲಜನಕ ಪೂರೈಕೆ
* ವಿಶಾಖಪಟ್ಟಣದಿಂದ ದ್ರವೀಕೃತ ವೈದ್ಯಕೀಯ ಆಮ್ಲಜನಕ ಟ್ಯಾಂಕರ್‌ಗಳನ್ನು ಹೊತ್ತ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ಶನಿವಾರ ಬೆಳಿಗ್ಗೆ ಮಹಾರಾಷ್ಟ್ರದ ನಾಸಿಕ್ ತಲುಪಿದೆ.
* ದ್ರವೀಕೃತ ವೈದ್ಯಕೀಯ ಆಮ್ಲಜನಕದ 3 ಟ್ಯಾಂಕರ್‌ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಶನಿವಾರ ಉತ್ತರ ಪ್ರದೇಶವನ್ನು ತಲುಪಿತು.
*ಪೂರ್ವ ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಗೆ ತಲುಪಲು ಆಮ್ಲಜನಕ ಟ್ಯಾಂಕರ್‌ಗೆ ವಿಶೇಷ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ದೆಹಲಿ ಪೊಲೀಸರು ನಿರ್ಮಿಸಿದ್ದರು.
*ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ 24 ಕ್ರಯೋಜೆನಿಕ್ ಕಂಟೇನರ್‌ಗಳನ್ನು ಆಮದು ಮಾಡಿಕೊಳ್ಳಲು ಲಿಂಡ್ ಇಂಡಿಯಾ ಲಿಮಿಟೆಡ್ ಜೊತೆ ಐಟಿಸಿ ಗ್ರೂಪ್ ಶನಿವಾರ ಒಪ್ಪಂದ ಮಾಡಿಕೊಂಡಿದೆ.

ಆಮ್ಲಜನಕದ ದಾಸ್ತಾನುಕೊರತೆ
ಆಮ್ಲಜನಕದ ಕೊರತೆಯು ಸತತ ಐದು ದಿನಗಳಿಂದ ದೆಹಲಿಯ ಆಸ್ಪತ್ರೆಗಳನ್ನು ಕಾಡುತ್ತಿದೆ. ಆಸ್ಪತ್ರೆಯಲ್ಲಿರುವ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ವೇದಿಕೆಗಳ ಮೂಲಕ ಆಸ್ಪತ್ರೆಗಳು ಮಾಹಿತಿ ನೀಡುತ್ತಿವೆ. ಮಹಾರಾಜ ಅಗ್ರಸೇನ ಆಸ್ಪತ್ರೆಯು ಕೋರ್ಟ್‌ ಮೊರೆ ಹೋಗಿತ್ತು.

ನಗರದ ಪ್ರತಿಷ್ಠಿತ ಗಂಗಾರಾಮ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 25 ರೋಗಿಗಳು ಮೊನ್ನೆ ತಾನೇ ಮೃತಪಟ್ಟಿದ್ದರು. ಈ ಘಟನೆ ಮರುಕಳಿಸುವುದನ್ನು ತಡೆಯಲು ಆಸ್ಪತ್ರೆ ಆಡಳಿತ ಮಂಡಳಿ ಮುಂದಾಗಿದೆ. ಆಸ್ಪತ್ರೆಗೆ ಪ್ರತಿನಿತ್ಯ 11 ಸಾವಿರ ಘನ ಮೀಟರ್‌ನಷ್ಟು ಆಮ್ಲಜನಕ ಅಗತ್ಯವಿದೆ. ಬೆಳಿಗ್ಗೆ 11.35ಕ್ಕೆ ಆಮ್ಲಜನಕದ ವಾಹನ ಆಸ್ಪತ್ರೆಗೆ ತಲುಪುವ ವೇಳೆಗೆ ಆಸ್ಪತ್ರೆಯಲ್ಲಿ ಕೇವಲ 200 ಘನ ಮೀಟರ್‌ನಷ್ಟು ಆಮ್ಲಜನಕ ಉಳಿದಿತ್ತು.

ತುಘಲಕಾಬಾದ್‌ನ ಬಾತ್ರಾ ಆಸ್ಪತ್ರೆಗೆ ಸರ್ಕಾರವು ಆಮ್ಲಜನಕ ಪೂರೈಸಿ ದಾಗ ಆಸ್ಪತ್ರೆಯ ದಾಸ್ತಾನು ಬಹುತೇಕ ಮುಗಿಯುವ ಹಂತದಲ್ಲಿತ್ತು. ಶಾಲಿಮಾರ್‌ಬಾಗ್‌ನ ಫೋರ್ಟಿಸ್ ಆಸ್ಪತ್ರೆಯಲ್ಲೂ ಆಮ್ಲಜನಕ ದಾಸ್ತಾನು ಕೊರತೆ ಇದೆ. ತುರ್ತು ಸಮಯದಲ್ಲಿ ಬಳಸಬೇಕಿರುವ ಆಮ್ಲಜನಕವನ್ನು ಸಹ ಬಳಕೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿತು. ಹೊಸ ರೋಗಿಗಳ ಸೇರ್ಪಡೆಗೆ ನಿರ್ಬಂಧ ಹೇರಿ, ಇರುವ ರೋಗಿಗಳಿಗೆ ಆಮ್ಲಜನಕ ಪೂರೈಸಲು ಆಸ್ಪತ್ರೆ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.