ADVERTISEMENT

ಕೋವಿಡ್‌ ನಿರ್ವಹಣೆ: ರಾಜ್ಯಗಳಿಗೆ ನೆರವಾಗುವಂತೆ ಸೇನೆಗೆ ರಾಜನಾಥ್‌ ಸಿಂಗ್ ಸೂಚನೆ

ಭೂಸೇನೆ, ವಾಯುಪಡೆ, ನೌಕಾಪಡೆ ಅಧಿಕಾರಿಗಳೊಂದಿಗೆ ಚರ್ಚೆ, ಸೇನಾ ಆಸ್ಪತ್ರೆಗೂ ಸೂಚನೆ ರವಾನೆ

ಪಿಟಿಐ
Published 20 ಏಪ್ರಿಲ್ 2021, 7:27 IST
Last Updated 20 ಏಪ್ರಿಲ್ 2021, 7:27 IST
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್   

ನವದೆಹಲಿ: ದೇಶದಾದ್ಯಂತ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮೂರೂ ಸೇನಾಪಡೆಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ವಿವಿಧ ರಾಜ್ಯಗಳಲ್ಲಿರುವ ಸೇನಾ ಘಟಕಗಳು ಆಯಾ ರಾಜ್ಯ ಸರ್ಕಾರವನ್ನು ಸಂಪರ್ಕಿಸಿ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ನೆರವು ನೀಡುವಂತೆ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರಗಳಿಗೆ ನೆರವು ನೀಡುವುದರ ಜೊತೆಗೆ ಸಾಧ್ಯವಾದಲ್ಲೆಲ್ಲಾ ಸೇನಾ ಆಸ್ಪತ್ರೆಗಳಲ್ಲಿ (ವೈದ್ಯಕೀಯ ಸೌಲಭ್ಯವಿದ್ದ ಕಡೆ) ನಾಗರಿಕರಿಗೆ ಚಿಕಿತ್ಸೆ ನೀಡಲು ಸೇನೆ ನಿರ್ಧರಿಸಿದೆ. ಇದೇ ವೇಳೆ, ರಾಜ್ಯ ಗಳಿಗೆ ಯಾವ ರೀತಿಯ ನೆರವು ಬೇಕೆಂಬುದನ್ನು ತಿಳಿಯಲು ಹಿರಿಯ– ಉನ್ನತ ಸೇನಾಧಿಕಾರಿಯೊಬ್ಬರಿಗೆ ಆಯಾ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವರು ತಮ್ಮ ಸಚಿವಾಲಯದ ಪ್ರಮುಖ ಅಧಿಕಾರಿಗಳು ಹಾಗೂ ರಕ್ಷಣಾ ಕ್ಷೇತ್ರದ ಮೂರು ಪಡೆಗಳ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದು, ದೇಶದಾದ್ಯಂತ ಉಲ್ಬಣಗೊಳ್ಳುತ್ತಿರುವ ಕೊರೊನಾ ಪ್ರಕರಣಗಳನ್ನು ನಿರ್ವಹಿಸಲು, ಎಲ್ಲ ರಾಜ್ಯಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗಳಿಗೆ ಕೊರೊನಾ ಪ್ರಕರಣಗಳ ನಿರ್ವಹಣೆಗೆ ನೆರವು ನೀಡುವ ಸಂಬಂಧ ಸಿದ್ಧತೆ ನಡೆಸುವಂತೆ ಸೂಚಿಸಲಾಗಿದೆ.

ಕೇಂದ್ರ ರಕ್ಷಣಾ ಕಾರ್ಯದರ್ಶಿ ಅಜಯ್‌ ಕುಮಾರ್ ಅವರು ರಾಜ್ಯ ಸರ್ಕಾರಗಳಿಗೆ ಸೇನಾ ಪಡೆಗಳು ಯಾವ ರೀತಿ ನೆರವು ನೀಡಬಹುದು ಎಂಬುದರ ಬಗ್ಗೆ ಪರಾಮರ್ಶೆ ನಡೆಸಿದ್ದಾರೆ. ಆ ಪ್ರಕಾರ, ರಕ್ಷಣಾ ಸಚಿವಾಲಯ ದೇಶದಲ್ಲಿರುವ 67 ಸೇನಾ ಆಸ್ಪತ್ರೆಗಳಿಗೆ ಸೂಚನೆ ನೀಡಿ, ಆಯಾ ರಾಜ್ಯ ಸರ್ಕಾರಗಳಿಗೆ ನೆರವಾಗುವಂತೆ ತಿಳಿಸಿದ್ದಾರೆ.

ಕೋವಿಡ್‌ ನಿರ್ವಹಣೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಎಲ್ಲ ರಾಜ್ಯ ಸರ್ಕಾರಗಳಿಗೂ ನೆರವಾಗುವುದಾಗಿ ತಿಳಿಸಿದೆ. ಈಗಾಗಲೇ ದೆಹಲಿಯ ವಿಮಾನ ನಿಲ್ದಾಣದ ಸಮೀಪ ಕೋವಿಡ್ ಆರೈಕೆ ಕೇಂದ್ರವನ್ನು ಪುನರಾರಂಭಿಸಿದೆ. 250 ಹಾಸಿಗೆಗಳ ಸಾಮರ್ಥ್ಯವಿದ್ದ ಈ ಕೇಂದ್ರವನ್ನು 1ಸಾವಿರ ಹಾಸಿಗೆಗಳ ಕೇಂದ್ರವಾಗಿ ಉನ್ನತೀಕರಿಸಿದೆ. ಲಖನೌದಲ್ಲೂ ಇಂಥದ್ದೇ ಕೋವಿಡ್‌ ಕೇರ್ ಕೇಂದ್ರವನ್ನು ಡಿಆರ್‌ಡಿಒ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.