ADVERTISEMENT

ಕೋವಿಡ್‌: ಸೋಂಕು ದೃಢೀಕರಣ ಪ್ರಮಾಣ ಇಳಿಮುಖ

382 ಜಿಲ್ಲೆಗಳಲ್ಲಿ ದೃಡೀಕರಣ ಪ್ರಮಾಣ ಶೇ 10ಕ್ಕಿಂತ ಹೆಚ್ಚು : ಲಸಿಕೆ ಪೋಲು ಪ್ರಮಾಣವು ಇಳಿಕೆ

ಪಿಟಿಐ
Published 22 ಮೇ 2021, 14:15 IST
Last Updated 22 ಮೇ 2021, 14:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್–19 ಸೋಂಕು ದೃಢೀಕರಣ ಪ್ರಮಾಣ ಇಳಿಮುಖದ ಹಾದಿಯಲ್ಲಿದೆ. ಮೇ 10ರಂದು ಶೇ 24.83ರಷ್ಟಿದ್ದ ಪ್ರಮಾಣ ಮೇ 22ಕ್ಕೆ ಶೇ 12.45ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕಟಿಸಿದೆ.

ಒಟ್ಟಾರೆಯಾಗಿ ದೃಡೀಕರಣ ಪ್ರಮಾಣ, ನಿತ್ಯ ದಾಖಲಾಗುತ್ತಿದ್ದ ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಕುಗ್ಗುತ್ತಿದೆ. ಇದರಿಂದಾಗಿ ಕೋವಿಡ್‌ –19 ಪರಿಸ್ಥಿತಿಯಲ್ಲಿ ಸ್ಥಿರತೆ ಕಂಡುಬಂದಿದೆ ಎಂದುನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ.ಪಾಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೊರೊನಾ ಸೋಂಕು ಮಕ್ಕಳಿಗೂ ಹರಡಬಹುದು. ಆದರೆ, ತೀವ್ರತೆ ಕಡಿಮೆ ಇರಲಿದ್ದು, ಮಕ್ಕಳಲ್ಲಿ ಸಾವಿನ ಪ್ರಮಾಣವೂ ಕಡಿಮೆ ಇರುತ್ತದೆ ಎಂದು ಪಾಲ್‌ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ADVERTISEMENT

ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದರೂ ವಿವಿಧ 382 ಜಿಲ್ಲೆಗಳಲ್ಲಿ ಪ್ರಕರಣಗಳ ದೃಡೀಕರಣ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚಾಗಿದೆ. ಎಂಟು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷಕ್ಕೂ ಅಧಿಕ, ದೃಡೀಕರಣ ಪ್ರಮಾಣ ಶೇ 15ಕ್ಕೂ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರವಾಲ್‌ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಕೋವಿಶೀಲ್ಡ್‌ ಲಸಿಕೆ ಪೋಲು ಪ್ರಮಾಣವೂ ಕುಗ್ಗಿದೆ. ಇದು ಮಾರ್ಚ್ 1ರಂದು ಶೇ 8ರಷ್ಟಿದ್ದರೆ, ಈಗ ಶೇ 1ಕ್ಕೆ ಕುಸಿದಿದೆ. ಕೋವ್ಯಾಕ್ಸಿನ್‌ ಲಸಿಕೆ ಪೋಲು ಪ್ರಮಾಣವು ಇದೇ ಅವಧಿಯಲ್ಲಿ ಶೇ 17ರಿಂದ ಶೇ 4ಕ್ಕೆ ಇಳಿದಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಲಸಿಕೆ ಪಾಸ್‌ಪೋರ್ಟ್‌ ವಿವಾದ ಕುರಿತ ಪ್ರಶ್ನೆಗೆ, ಸದ್ಯ ಈ ವಿಷಯ ವಿಶ್ವ ಆರೋಗ್ಯ ಸಂಸ್ಥೆಯ ಮಟ್ಟದಲ್ಲಿ ಪರಿಶೀಲನೆಯಲ್ಲಿದ್ದು, ಚರ್ಚೆ ನಡೆದಿದೆ. ಇನ್ನೂ ಯಾವುದೇ ಸಹಮತ ಮೂಡಿಲ್ಲ ಎಂದು ಲವ್ ಅಗರವಾಲ್ ಪ್ರತಿಕ್ರಿಯಿಸಿದರು.

ಆರೋಗ್ಯ ಸಚಿವಾಲಯದ ಅಂಕಿ ಅಂಶದ ಪ್ರಕಾರ, ದೇಶದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ, ಸತತ ಆರನೇ ದಿನದಲ್ಲಿ 3 ಲಕ್ಷಕ್ಕೂ ಕಡಿಮೆ ಇತ್ತು. ಶನಿವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 2.57 ಲಕ್ಷ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.