ADVERTISEMENT

ಜಾರ್ಖಂಡ್‌ ಜೈಲುಗಳಿಂದ 7 ಸಾವಿರ ಕೈದಿಗಳ ಬಿಡುಗಡೆ ಸಂಭವ

ಪಿಟಿಐ
Published 23 ಮೇ 2021, 11:12 IST
Last Updated 23 ಮೇ 2021, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಂಚಿ: ಜಾರ್ಖಂಡ್‌ನ ಕಾರಾಗೃಹಗಳಲ್ಲಿರುವ ಸುಮಾರು 7 ಸಾವಿರ ಕೈದಿಗಳನ್ನು ಸುಪ್ರೀಂ ಕೋರ್ಟ್‌ ಸೂಚನೆಯಂತೆ ಮಧ್ಯಂತರ ಜಾಮೀನು ಇಲ್ಲವೇ ಪೆರೋಲ್ ಮೂಲಕ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅಪರಾಧಿಗಳಿಗೆ ಪೆರೋಲ್ ಇಲ್ಲವೇ ಮಧ್ಯಂತರ ಜಾಮೀನು ಮೇಲೆ ಬಿಡುಗಡೆ ಮಾಡಲು ಕೈದಿಗಳ ಪಟ್ಟಿಯನ್ನು ತಯಾರಿಸುವಂತೆ ಜೈಲಿನ ಅಧೀಕ್ಷಕರುಗಳಿಗೆ ಆದೇಶ ಹೊರಡಿಸಲಾಗಿದೆ ಎಂದು ಜಾರ್ಖಂಡ್‌ನ ಕಾರಾಗೃಹ ಇಲಾಖೆಯ ಐಜಿಪಿ ಬೀರೇಂದ್ರ ಭೂಷಣ್ ತಿಳಿಸಿದ್ದಾರೆ.

‘ಕೋರ್ಟ್ ಅನುಮತಿ ನೀಡಿದರೆ ಎಲ್ಲಾ 7 ಸಾವಿರ ಕೈದಿಗಳಿಗೆ ಮಧ್ಯಂತರ ಜಾಮೀನು ದೊರೆಯಲಿದೆ. ಇವರನ್ನು ಬಿಡುಗಡೆ ಮಾಡಿದಲ್ಲಿ ಮಾತ್ರ ಕಾರಾಗೃಹಗಳಲ್ಲಿ ನಿಗದಿತ ಸಾಮರ್ಥ್ಯದ ಕೈದಿಗಳನ್ನು ಇರಿಸಲು ಸಾಧ್ಯವಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ವಿಚಾರಣಾ ಹಂತದಲ್ಲಿರುವ 15,900 ಕೈದಿಗಳು ಸೇರಿದಂತೆ ಒಟ್ಟು 21,046 ಕೈದಿಗಳು ರಾಜ್ಯದ 30 ಕಾರಾಗೃಹಗಳಲ್ಲಿದ್ದಾರೆ. ಈ ಕಾರಾಗೃಹಗಳ ಒಟ್ಟು ಸಾಮರ್ಥ್ಯ 16,700 ಮಾತ್ರ ಇದೆ. ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಮೂರ್ತಿ ಎ.ಕೆ. ಸಿಂಗ್, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಅರುಣ್ ಎಕ್ಕಾ ಮತ್ತು ಕಾರಾಗೃಹ ಇಲಾಖೆಯ ಐಜಿ ಬೀರೇಂದ್ರ ಭೂಷಣ್ ಅವರನ್ನೊಳಗೊಂಡ ಉನ್ನತಾಧಿಕಾರದ ಸಮಿತಿಯು ಮೇ 17ರಂದು ಸಭೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದೆ. ನಿಯಮಗಳಿಗೆ ಅನುಸಾರವಾಗಿ ಜಾಮೀನು ಇಲ್ಲವೆ ಪೆರೋಲ್ ಅಡಿಯಲ್ಲಿ ಬಿಡುಗಡೆ ಮಾಡಲು ಅರ್ಹರಿರುವ ಕೈದಿಗಳ ಪಟ್ಟಿಯನ್ನು ತಯಾರಿಸುವಂತೆ ಜೈಲು ಅಧೀಕ್ಷಕರುಗಳಿಗೆ ಸೂಚಿಸಲಾಗಿದೆ.

‘ಅರ್ಹ ಕೈದಿಗಳ ಪಟ್ಟಿಯನ್ನು ತಯಾರಿಸುವ ಜತೆಗೆ ಜನದಟ್ಟಣೆಯ ಕಾರಾಗೃಹಗಳಿಂದ ಕೈದಿಗಳನ್ನು ಕಡಿಮೆ ಜನದಟ್ಟಣೆ ಇರುವ ಕಾರಾಗೃಹಗಳಿಗೆ ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ’ ಎಂದು ಭೂಷಣ್ ತಿಳಿಸಿದ್ದಾರೆ.

ಕೋವಿಡ್‌–19 ಪ್ರಕರಣಗಳು ತೀವ್ರಗತಿಯಲ್ಲಿ ಉಲ್ಬಣಿಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಕೈದಿಗಳನ್ನು ಪೆರೋಲ್ ಇಲ್ಲವೇ ಜಾಮೀನಿನ ಮೇರೆಗೆ ತಕ್ಷಣ ಬಿಡುಗಡೆ ಮಾಡುವಂತೆ ಮೇ 8ರಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.