ADVERTISEMENT

'ಕೋವಿಶೀಲ್ಡ್' ಲಸಿಕೆ ಪಡೆದ ಸೀರಂ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ

ಏಜೆನ್ಸೀಸ್
Published 16 ಜನವರಿ 2021, 9:44 IST
Last Updated 16 ಜನವರಿ 2021, 9:44 IST
ಸೆರಂ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ
ಸೆರಂ ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ   

ನವದೆಹಲಿ: ಕೋವಿಡ್-19 ಲಸಿಕೆಯ ಪರಿಣಾಮಕಾರಿತ್ವ ನಿರೂಪಿಸುವ ಹಾಗೂ ಅಪನಂಬಿಕೆಗಳನ್ನು ದೂರವಾಗಿಸುವ ನಿಟ್ಟಿನಲ್ಲಿ ಲಸಿಕಾ ತಯಾರಕಾ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ಶನಿವಾರದಂದು 'ಕೋವಿಶೀಲ್ಡ್' ಲಸಿಕೆಯನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ದೇಶದಲ್ಲಿ ಕೋವಿಡ್-19 ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಪಡೆಯುವ ವಿಡಿಯೊ ಪೋಸ್ಟ್ ಮಾಡಿರುವ ವಿಶ್ವದ ಅತಿ ದೊಡ್ಡ ಔಷಧ ತಯಾರಕ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ, ಜಗತ್ತಿನಅತಿ ದೊಡ್ಡ ಲಸಿಕೆ ಹಂಚಿಕೆ ಅಭಿಯಾನವನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಉತ್ತಮ ಯಶಸ್ಸು ಸಿಗಲಿ ಎಂದು ಶುಭಾಶಯ ಕೋರಿದರು.

ADVERTISEMENT

ಕೋವಿಶೀಲ್ಡ್ ಲಸಿಕೆ ಹಂಚಿಕೆಯ ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದು ನನಗೆ ಬಹಳ ಹೆಮ್ಮೆ ತಂದಿದೆ. ಇದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಲಸಿಕೆ ಸ್ವೀಕರಿಸುವ ಆರೋಗ್ಯ ಸೇನಾನಿಗಳೊಂದಿಗೆ ನಾನು ಭಾಗಿಯಾಗುತ್ತೇನೆ ಎಂದು ತಿಳಿಸಿದರು.

ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಪ್ರಸ್ತುತ ಎರಡು ಕೋವಿಡ್-19 ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ಅತ್ತ ಕೊವಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.