ADVERTISEMENT

5 ಲಕ್ಷ ಐಸಿಯು ಹಾಸಿಗೆಗಳು ಅಗತ್ಯ: ಖ್ಯಾತ ವೈದ್ಯ ಡಾ. ದೇವಿಶೆಟ್ಟಿ

3.5 ಲಕ್ಷ ವೈದ್ಯಕೀಯ ಸಿಬ್ಬಂದಿ ಬೇಕು

ಪಿಟಿಐ
Published 29 ಏಪ್ರಿಲ್ 2021, 19:30 IST
Last Updated 29 ಏಪ್ರಿಲ್ 2021, 19:30 IST
ಡಾ. ದೇವಿಶೆಟ್ಟಿ
ಡಾ. ದೇವಿಶೆಟ್ಟಿ   

ಪುಣೆ: ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ಈಗ ಹದಗೆಟ್ಟಿರುವ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಖ್ಯಾತ ವೈದ್ಯ ಡಾ. ದೇವಿ ಪ್ರಸಾದ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ಮುಂದಿನ ಕೆಲ ವಾರಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಭಾರತಕ್ಕೆ ಹೆಚ್ಚುವರಿಯಾಗಿ 5 ಲಕ್ಷ ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳು, 2 ಲಕ್ಷ ನರ್ಸ್‌ಗಳು ಮತ್ತು 1.5 ಲಕ್ಷ ವೈದ್ಯರು ಬೇಕಾಗುತ್ತಾರೆ’ ಎಂದು ಅವರು ಹೇಳಿದ್ದಾರೆ.

ಸಿಂಬಿಯಾಸಿಸ್‌ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಆನ್‌ಲೈನ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಸದ್ಯ 75 ಸಾವಿರದಿಂದ 90 ಸಾವಿರ ಐಸಿಯು ಹಾಸಿಗೆಗಳಿವೆ. ಈಗಾಗಲೇ ಬಹುತೇಕ ಈ ಹಾಸಿಗೆಗಳು ರೋಗಿಗಳಿಂದ ಭರ್ತಿಯಾಗಿವೆ. ಕೋವಿಡ್‌–19 ಎರಡನೇ ಅಲೆ ಇನ್ನೂ ಸಂಪೂರ್ಣ ಮುಗಿಯುವ ಮುನ್ನವೇ ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಭಾರತದಲ್ಲಿ ಪ್ರತಿ ದಿನ 3.5 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಸಂಖ್ಯೆ 5 ಲಕ್ಷ ತಲುಪಬಹುದು ಎಂದು ಕೆಲವು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ ಭೀಕರ ಪರಿಸ್ಥಿತಿ ಮುಂದುವರಿದರೆ ಐಸಿಯುಗಳಲ್ಲೇ ರೋಗಿಗಳು ಸಾವಿಗೀಡಾಗಬಹುದು. ಏಕೆಂದರೆ, ರೋಗಿಗಳ ಆರೈಕೆಗೆ ವೈದ್ಯರು ಮತ್ತು ನರ್ಸ್‌ಗಳೇ ಇಲ್ಲ’ ಎಂದು ಅವರು ಆರೋಗ್ಯ ರಕ್ಷಣೆಯ ಅವ್ಯವಸ್ಥೆಯನ್ನು ಅನಾವರಣಗೊಳಿಸಿದ್ದಾರೆ.

ADVERTISEMENT

‘ಇಂತಹ ಭೀಕರ ಪರಿಸ್ಥಿತಿ ಸೃಷ್ಟಿಯಾಗುವುದರಲ್ಲಿ ಸಂಶಯವೇ ಇಲ್ಲ. ಕೋವಿಡ್‌ ದೃಢಪಟ್ಟ ಒಬ್ಬ ರೋಗಿಯಿಂದ ಮತ್ತೆ 5ರಿಂದ 10 ಜನರಿಗೆ ಸೋಂಕು ಹಬ್ಬುತ್ತದೆ. ಆದರೆ, ಇವರನ್ನು ಪರೀಕ್ಷೆಗೆ ಒಳಪಡಿಸಿಲ್ಲ. ಅಂದರೆ, ಭಾರತದಲ್ಲಿ ಪ್ರತಿ ದಿನ 15ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಅಂಕಿ–ಸಂಖ್ಯೆಗಳ ಪ್ರಕಾರ ಶೇಕಡ 5ರಷ್ಟು ಸೋಂಕಿತ ರೋಗಿಗಳಿಗೆ ಐಸಿಯು ಹಾಸಿಗೆ ಬೇಕಾಗುತ್ತದೆ. ಇಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ಸರಾಸರಿ, ಒಬ್ಬ ರೋಗಿ ಐಸಿಯುನಲ್ಲಿ ಕನಿಷ್ಠ 10 ದಿನಗಳನ್ನು ಕಳೆಯುತ್ತಾನೆ. ಹೀಗಾದರೆ, ಯಾವ ರೀತಿಯ ಪರಿಸ್ಥಿತಿ ಸೃಷ್ಟಿಯಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಬೇಕಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಐಸಿಯುನಲ್ಲಿ ಕೋವಿಡ್‌ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವಲ್ಲಿ ವೈದ್ಯರು, ನರ್ಸ್‌ಗಳ ಪಾತ್ರ ಮುಖ್ಯವಾಗಿದೆ. ಈ ಸಾಂಕ್ರಾಮಿಕ ಕಾಯಿಲೆ ಹಬ್ಬುವ ಮುನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇಕಡ 78ರಷ್ಟು ತಜ್ಞ ವೈದ್ಯರ ಕೊರತೆ ಇತ್ತು. ಮುಂದಿನ ಒಂದು ವರ್ಷ ಕೋವಿಡ್‌ ನಿರ್ವಹಣೆಗಾಗಿಯೇ ಸಮರ್ಪಿಸಿಕೊಳ್ಳಲು ನಮಗೆ ಕನಿಷ್ಠ 2 ಲಕ್ಷ ನರ್ಸ್‌ಗಳು ಮತ್ತು 1.5 ಲಕ್ಷ ವೈದ್ಯರನ್ನು ಕೆಲ ದಿನಗಳಲ್ಲೇ ನಿಯೋಜಿಸುವ ಅಗತ್ಯವಿದೆ’ ಎಂದು ವಿವರಿಸಿದ್ದಾರೆ.

ಈ ಸಮಸ್ಯೆಯನ್ನು ಅಲ್ಪಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ ಪರಿಹಾರವನ್ನು ಅವರು ಸೂಚಿಸಿದ್ದಾರೆ. ‘ದೇಶದಲ್ಲಿ ಮೂರು ವರ್ಷ ಅವಧಿಯ ಜನರಲ್‌ ನರ್ಸಿಂಗ್‌ ಕೋರ್ಸ್‌ ಮತ್ತು ನಾಲ್ಕು ವರ್ಷ ಅವಧಿಯ ಬಿ.ಎಸ್ಸಿ ನರ್ಸಿಂಗ್‌ ಕೋರ್ಸ್‌ ಮುಗಿಸಿರುವ 2.20 ಲಕ್ಷ ನರ್ಸಿಂಗ್‌ ವಿದ್ಯಾರ್ಥಿಗಳಿದ್ದು, ಇವರು ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿಗಳನ್ನು ಪದವೀಧರರೆಂದು ಪರಿಗಣಿಸಿ ಕೋವಿಡ್‌ ಐಸಿಯು ವಾರ್ಡ್‌ಗಳಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಲು ಆರೋಗ್ಯ ಸಚಿವಾಲಯ ಮತ್ತು ಭಾರತೀಯ ನರ್ಸಿಂಗ್‌ ಕೌನ್ಸಿಲ್‌ ಅವಕಾಶ ಕಲ್ಪಿಸಬೇಕು’ ಎಂದಿದ್ದಾರೆ.

ಈ ನರ್ಸಿಂಗ್‌ ವಿದ್ಯರ್ಥಿಗಳಿಗೆ ಒಂದು ವರ್ಷದ ಬಳಿಕ ಪ್ರಮಾಣ ಪತ್ರ ನೀಡಬಹುದು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ.

‘ಜತೆಗೆ, 1.3 ಲಕ್ಷ ಯುವ ವೈದ್ಯರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ನೀಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಕೇವಲ 35 ಸಾವಿರ ಸೀಟುಗಳು ಮಾತ್ರ ಲಭ್ಯ. ಹೀಗಾಗಿ, ಆನ್‌ಲೈನ್‌ ಪರೀಕ್ಷೆಯನ್ನು ತಕ್ಷಣವೇ ನಡೆಸಿ ಫಲಿತಾಂಶವನ್ನು ತ್ವರಿತಗತಿಯಲ್ಲಿ ಪ್ರಕಟಿಸಬೇಕು. ಇದರಿಂದ, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯದ ಸುಮಾರು ಒಂದು ಲಕ್ಷ ಯುವ ವೈದ್ಯರು ನಮಗೆ ಲಭ್ಯರಾಗುತ್ತಾರೆ’ ಎಂದು ವಿವರಿಸಿದ್ದಾರೆ.

‘ವಿದೇಶದಲ್ಲೂ 90 ಸಾವಿರದಿಂದ 1 ಲಕ್ಷದವರೆಗೆ ವೈದ್ಯರು ಪದವಿ ಪಡೆದಿದ್ದಾರೆ. ಆದರೆ, ಅವರು ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಇವರಲ್ಲಿನ 20 ಸಾವಿರ ಪ್ರತಿಭಾವಂತರನ್ನು ಗುರುತಿಸಿ ಒಂದು ವರ್ಷ ಸೇವೆಗೆ ಬಳಸಿಕೊಳ್ಳಬಹುದು’ ಎಂದು ಸಲಹೆ ನೀಡಿದ್ದಾರೆ.

***

ಈಗಿನ ಸಾಂಕ್ರಾಮಿಕ ಕಾಯಿಲೆ ಇನ್ನೂ 4ರಿಂದ 5 ತಿಂಗಳ ಕಾಲ ಇರುವ ಸಾಧ್ಯತೆ ಇದೆ. ಬಳಿಕ, ನಾವು ಮೂರನೇ ಅಲೆಗೂ ಸಿದ್ಧರಾಗಬೇಕಾಗಿದೆ.
-ಡಾ. ದೇವಿ ಪ್ರಸಾದ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.