ADVERTISEMENT

ಕೋವಿಡ್: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಶೇ 76.5 ಸಕ್ರಿಯ ಪ್ರಕರಣಗಳು

ಪಿಟಿಐ
Published 15 ಫೆಬ್ರುವರಿ 2021, 13:51 IST
Last Updated 15 ಫೆಬ್ರುವರಿ 2021, 13:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಪ್ರಸ್ತುತ 1.39 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಇವುಗಳಲ್ಲಿ ಶೇ 76.5ರಷ್ಟು ಪ್ರಕರಣಗಳು ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿವೆ.

ಉಳಿದಂತೆ ಕಳೆದ 24 ಗಂಟೆಗಳ ಮಾಹಿತಿಯಂತೆ, 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರಕ್ಕಿಂತಲೂ ಕಡಿಮೆ ಇರುವುದು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೇ ಶೇ 74.72ರಷ್ಟು ಪ್ರಕರಣಗಳಿವೆ. ತ್ರಿಪುರಾ, ದಮನ್ ಮತ್ತು ಡಿಯು, ನಗರ್ ಹವೇಲಿಯಲ್ಲಿ ತಲಾ 2 ಸಕ್ರಿಯ ಪ್ರಕರಣಗಳಷ್ಟೇ ಇವೆ.

ADVERTISEMENT

ಕಳೆದ 24 ಗಂಟೆಗಳಲ್ಲಿ 18 ರಾಜ್ಯಗಳಲ್ಲಿ ಒಂದು ಸಾವು ಪ್ರಕರಣ ವರದಿಯಾಗಿಲ್ಲ. 10 ರಾಜ್ಯಗಳಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ಸಚಿವಾಲಯ ವಿವರಿಸಿದೆ.

ಲಸಿಕೆ ಅಭಿಯಾನ: ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೂ ಒಟ್ಟು 83 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಒಟ್ಟು 82,85,295 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ಎರಡನೇ ಹಂತದಲ್ಲಿ ಒಟ್ಟು 24,561 ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಫೆ.13ರಂದು ಎರಡನೇ ಹಂತದ ಅಭಿಯಾನ ಆರಂಭವಾಗಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರಿಗೆ 28 ದಿನದ ನಂತರ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ನೀಡಿಕೆಯಲ್ಲಿ 10 ರಾಜ್ಯಗಳಲ್ಲಿ ಉತ್ತಮ ಪ್ರಗತಿಯಾಗಿದೆ. ಒಟ್ಟು ಫಲಾನುಭವಿಗಳಲ್ಲಿ ಶೇ 69ರಷ್ಟು ಮಂದಿ 10 ರಾಜ್ಯಗಳಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ ಅಂದರೆ ಶೇ 10.4ರಷ್ಟು ಫಲಾನುಭವಿಗಳಿಗೆ (8.58 ಲಕ್ಷ) ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 9,489 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖಗೊಂಡವರ ಸಂಖ್ಯೆ 1.06 ಕೋಟಿಗೆ ಏರಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 90 ಜನರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.