ನವದೆಹಲಿ: ಕೇರಳದಲ್ಲಿ ಮತ್ತೆ ಕೋವಿಡ್–19 ದೃಢಪಟ್ಟ ಪ್ರಕರಣಗಳು ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 9,250 ಹೊಸ ಪ್ರಕರಣಗಳು ದಾಖಲಾಗಿವೆ. ಈವರೆಗೂ 1,75,304 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 91,756 ಸಕ್ರಿಯ ಪ್ರಕರಣಗಳಿವೆ.
ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಕುರಿತು ಯುವಜನ ಮತ್ತು ಕ್ರೀಡಾ ಸಚಿವಾಲಯ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೋವಿಡ್–19 ಮುನ್ನೆಚ್ಚರಿಕೆಯಾಗಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದ್ದು, ಕೈಗವಸು ಮತ್ತು ಮಾಸ್ಕ್ ಧರಿಸಿರುವಾಗ ಮಾತ್ರವೇ ಫಿಟ್ನೆಸ್ ಸಾಧನಗಳನ್ನು ಬಳಸುವಂತೆ ತಿಳಿಸಲಾಗಿದೆ.
ಮಿಜೋರಾಂನಲ್ಲಿ 24 ಗಂಟೆಗಳಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಅಲ್ಲಿ ಒಟ್ಟು 2,157 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 2,860 ಪ್ರಕರಣಗಳು ವರದಿಯಾಗಿದ್ದು, ಇದೇ ಅವಧಿಯಲ್ಲಿ 39 ಮಂದಿ ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲಿ 10,913 ಪ್ರಕರಣಗಳು, ಆಂಧ್ರ ಪ್ರದೇಶದಲ್ಲಿ 5,145 ಹಾಗೂ ತಮಿಳುನಾಡಿನಲ್ಲಿ 5,185 ಪ್ರಕರಣಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ 636 ಪ್ರಕರಣಗಳು ವರದಿಯಾಗಿವೆ.
ಶುಕ್ರವಾರ ಬೆಳಗಿನವರೆಗೆ ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 70,496 ಪ್ರಕರಣಗಳು ವರದಿಯಾಗಿದ್ದು, 964 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ವರೆಗೂ ಭಾರತದಲ್ಲಿ ವರದಿಯಾದ ಒಟ್ಟಾರೆ ಸೋಂಕಿತರ ಸಂಖ್ಯೆ 69,06,152ಕ್ಕೆ ಏರಿದೆ. ಅದರಲ್ಲಿ 8,93,592 ಸಕ್ರಿಯ ಪ್ರಕರಣಗಳಿದ್ದು 59,06,070 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,06,490ಕ್ಕೆ ಏರಿದೆ.
11,94,321 ಮಾದರಿಗಳನ್ನು ಗುರುವಾರ ಪರೀಕ್ಷೆ ಮಾಡಲಾಗಿದ್ದು, ಈ ವರೆಗೆ ಒಟ್ಟು 8,46,34,680 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 14,93,884 ಪ್ರಕರಣಗಳು ವರದಿಯಾಗಿದ್ದು, ಈ ವರೆಗೆ 39,430 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.