ADVERTISEMENT

ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯಸಂಸ್ಕಾರ: 21 ಮಂದಿ ಸಾವು

ರಾಜಸ್ಥಾನದ ಸಿಕಾರ್‌ ಜಿಲ್ಲೆಯಲ್ಲಿ ನಡೆದ ಘಟನೆ

ಪಿಟಿಐ
Published 8 ಮೇ 2021, 11:24 IST
Last Updated 8 ಮೇ 2021, 11:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ಕೋವಿಡ್‌ನಿಂದ ಮೃತನಾದ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯಸಂಸ್ಕಾರ ಮಾಡಿದ ಕೆಲವೇ ದಿನಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ.

ಆದರೆ, ಏಪ್ರಿಲ್‌ 15ರಿಂದ ಮೇ 5ರ ಅವಧಿಯಲ್ಲಿ ಕೋವಿಡ್‌ನಿಂದಾಗಿ ನಾಲ್ವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ನಿಂದ ಮೃತನಾಗಿದ್ದ ವ್ಯಕ್ತಿಯ ಮೃತದೇಹವನ್ನು ಏ. 21ರಂದು ಖೀರ್ವಾ ಗ್ರಾಮಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಸುಮಾರು 150 ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಸಮಾಧಿ ಮಾಡುವ ಸಂದರ್ಭದಲ್ಲಿ ಶವವನ್ನು ಪ್ಲಾಸ್ಟಿಕ್ ಚೀಲದಿಂದ ಹೊರತೆಗೆಯಲಾಗಿದ್ದು, ಈ ಸಂದರ್ಭದಲ್ಲಿ ಹಲವರು ಶವವನ್ನು ಮುಟ್ಟಿದ್ದಾರೆ ಎನ್ನಲಾಗಿದೆ.

‘21 ಜನರ ಪೈಕಿ ಮೂರರಿಂದ ನಾಲ್ಕು ಮಂದಿ ಮಾತ್ರ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ. ಬಹುತೇಕರು ವಯೋಸಹಜ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ. ಮೃತಪಟ್ವವರ 147 ಕುಟುಂಬಗಳ ಎಲ್ಲ ಸದಸ್ಯರ ಗಂಟಲು ಮಾದರಿಯನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ. ಕೋವಿಡ್ ಸಮುದಾಯದ ನೆಲೆಯಲ್ಲಿ ಹಬ್ಬುತ್ತಿದೆಯೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಲಕ್ಷ್ಮಣಘಡದ ಉಪ ವಿಭಾಗೀಯ ಅಧಿಕಾರಿ ಕುಲರಾಜ್ ಮೀನಾ ಶನಿವಾರ ತಿಳಿಸಿದ್ದಾರೆ.

ಇಡೀ ಗ್ರಾಮವನ್ನು ಸ್ಯಾನಿಟೈಸೇಷನ್ ಮಾಡಲಾಗಿದ್ದು, ಗ್ರಾಮಸ್ಥರಿಗೆ ಸಮಸ್ಯೆಯ ತೀವ್ರತೆ ವಿವರಿಸಲಾಗಿದೆ.

ಸೋಂಕಿತ ಶವದ ಅಂತ್ಯಸಂಸ್ಕಾರದ ವಿಡಿಯೊ ಮತ್ತು ಸಾವಿನ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಅವರು ಕೆಲ ಸಮಯದ ಬಳಿಕ ವಿಡಿಯೊವನ್ನು ತೆಗೆದುಹಾಕಿದ್ದಾರೆ.

‘20ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಹಲವು ಜನರು ಸೋಂಕಿಗೊಳಗಾಗಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.