ADVERTISEMENT

ಸುರೇಶ ಅಂಗಡಿ ನಿಧನ: ಜ್ವರ ನಿರ್ಲಕ್ಷಿಸಿದ್ದು ತಪ್ಪಾಯಿತೇ?

ಸಿದ್ದಯ್ಯ ಹಿರೇಮಠ
Published 24 ಸೆಪ್ಟೆಂಬರ್ 2020, 4:52 IST
Last Updated 24 ಸೆಪ್ಟೆಂಬರ್ 2020, 4:52 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ನವದೆಹಲಿ: ಆರೋಗ್ಯದ‌ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದ ರೈಲ್ವೇ ಖಾತೆ‌ ರಾಜ್ಯ ಸಚಿವ‌ ಸುರೇಶ್ ಅಂಗಡಿ (65) ಕೋವಿಡ್-19 ಕುರಿತು ನಿರ್ಲಕ್ಷ್ಯ ವಹಿಸಿದ್ದು ಪ್ರಾಣಕ್ಕೇ ಸಂಚಕಾರ ತರಲು ಕಾರಣವಾಗಿದೆ.

ಸೆಪ್ಟೆಂಬರ್ ಮೊದಲ ವಾರ ಬೆಳಗಾವಿಯಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಪಡೆದಿದ್ದ ಅಂಗಡಿ, ನಂತರ ಕಾಣಿಸಿಕೊಂಡ ತೀವ್ರ ಜ್ವರವನ್ನು ನಿರ್ಲಕ್ಷಿಸಿ ಪ್ರಯಾಣ ಮಾಡಿದ್ದು ಅವರ ಪ್ರಾಣಕ್ಕೇ ಎರವಾಯಿತು.

ಹಲ್ಲು ನೋವಿನಿಂದಾಗಿ ಜ್ವರ‌ ಬಂದಿರಬಹುದು ಎಂದೇ ಭಾವಿಸಿದ್ದ ಅಂಗಡಿ, ಮುಂಬೈಗ ತೆರಳಿ ಅಲ್ಲಿಂದ ದೆಹಲಿಗೆ ‌ಪ್ರಯಾಣ ಬೆಳೆಸಿದ್ದರು. ದೆಹಲಿ ತಲುಪಿದ ನಂತರವೂ ಎರಡು- ಮೂರು ದಿನಗಳ ಕಾಲ ಕೋವಿಡ್ ಪರೀಕ್ಷೆ‌ ಮಾಡಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದರು. ಜ್ವರ ತೀವ್ರವಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ‌ ಬಳಿಕವಷ್ಟೇ ಅವರು ಏಮ್ಸ್ ಗೆ‌ ದಾಖಲಾದರು ಎಂದು ಅವರ ಆಪ್ತ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ADVERTISEMENT

ಚಿಕಿತ್ಸೆಯ ಆರಂಭದ ಹಂತದಲ್ಲಿ ಸ್ಪಂದಿಸಿದ್ದ ಅಂಗಡಿ ಅವರ ಆರೋಗ್ಯ ಉಲ್ಬಣಗೊಂಡಿದ್ದರಿಂದ ಪ್ಲಾಸ್ಮಾ ಚಿಕಿತ್ಸೆಯನ್ನೂ ನೀಡಲಾಗಿತ್ತು. ಅದೂ ಫಲ ನೀಡಲಿಲ್ಲ ಎಂದು ಅವರ ಸಂಬಂಧಿ, ಸಚಿವ ‌ಜಗದೀಶ್ ಶೆಟ್ಟರ್ ಹೇಳಿದರು.

ಜ್ವರ ಕಾಣಿಸಿಕೊಂಡ ಸಂದರ್ಭವೇ ಬೆಳಗಾವಿಯಲ್ಲಿ ಚಿಕಿತ್ಸೆ ಪಡೆದು ಮುನ್ನೆಚ್ಚರಿಕೆ ವಹಿಸಿದ್ದರೆ ಅಂಗಡಿ ಅವರು ಗುಣಮುಖ ಆಗಬಹುದಿತ್ತು. ಯಾರೇ ಆಗಲಿ, ಕೊರೊನಾ ಲಕ್ಷಣ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಕೂಡದು ಎಂದು ಅವರು ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.