ADVERTISEMENT

ಗುಂಪುಗೂಡುವಿಕೆ ತಪ್ಪಿಸಿ ಕೋವಿಡ್‌ ಲಸಿಕೆ ಪಡೆಯಿರಿ: ಕೇಂದ್ರ ಸರ್ಕಾರ ಸಲಹೆ

ಪಿಟಿಐ
Published 2 ಸೆಪ್ಟೆಂಬರ್ 2021, 15:32 IST
Last Updated 2 ಸೆಪ್ಟೆಂಬರ್ 2021, 15:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಭೀತಿ ಕಾರಣದಿಂದ ಹಬ್ಬಗಳ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಗುಂಪುಗೂಡಲು ಅವಕಾಶ ನೀಡಬಾರದು. ಅನಿವಾರ್ಯ ಎನಿಸಿದಲ್ಲಿ ಸಾಮೂಹಿಕವಾಗಿ ಲಸಿಕೆ ಪಡೆಯಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಜನರು ಆದ್ಯತೆ ಮೇರೆಗೆ ಲಸಿಕೆ ಪಡೆಯಬೇಕು, ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಟ್ಟಾರೆಯಾಗಿ ದೇಶದಲ್ಲಿ ವಾರದಿಂದ ವಾರಕ್ಕೆ ಕೋವಿಡ್ ಪ್ರಕರಣಗಳು ಇಳಿಮುಖವಾಗಿದ್ದರೂ ಇನ್ನೂ ಪೂರ್ಣವಾಗಿ ಎರಡನೇ ಅಲೆ ಅಂತ್ಯಗೊಂಡಿಲ್ಲ ಎಂಬುದನ್ನು ಗಮನಿಸಬೇಕು ಎಂದು ಎಚ್ಚರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ದೇಶದ 39 ಜಿಲ್ಲೆಗಳಲ್ಲಿ ಸೋಂಕು ದೃಢೀಕರಣ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಇದೆ. ಹಾಗೆಯೇ, 38 ಜಿಲ್ಲೆಗಳಲ್ಲಿ ದೃಢೀಕರಣ ಪ್ರಮಾಣವು ಶೇ 1 ರಿಂದ 10ರಷ್ಟು ಇದೆ ಎಂದು ತಿಳಿಸಿದರು.

ADVERTISEMENT

ದೇಶದಾದ್ಯಂತ ವಯಸ್ಕರಲ್ಲಿ ಶೇ 16ರಷ್ಟು ಜನಸಂಖ್ಯೆಗೆ ಲಸಿಕೆಯ ಎರಡೂ ಡೋಸ್‌ ನೀಡಲಾಗಿದೆ. ಶೇ 54ರಷ್ಟು ಜನಸಂಖ್ಯೆಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಮೂರನೇ ಅಲೆ ಆರಂಭವಾಗುವ ಭೀತಿ ಇದೆ. ಹಬ್ಬಗಳ ಋತುವಿನಲ್ಲಿ ಜನರ ಗುಂಪುಗೂಡುವಿಕೆ ತಪ್ಪಿಸುವುದು ಅಗತ್ಯ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಡಾ.ಬಲರಾಂ ಭಾರ್ಗವ ಅವರು ಹೇಳಿದರು.

ನಾಗರಿಕರು ಕೂಡಾ ಆದಷ್ಟೂ ಹಬ್ಬಗಳ ಆಚರಣೆಯನ್ನು ಮನೆಗೇ ಸೀಮಿತಗೊಳಿಸಬೇಕು ಹಾಗೂ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.