ADVERTISEMENT

ಶಬರಿಮಲೆ ಪ್ರಧಾನ ಅರ್ಚಕ ಹುದ್ದೆಗೆ ಈ ಬಾರಿ ಕೇವಲ 55 ಅರ್ಜಿ

ದೇವರ ಸೇವೆಗೂ ಕಾಡಿದ ಕೋವಿಡ್‌–19!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 11:04 IST
Last Updated 11 ಆಗಸ್ಟ್ 2020, 11:04 IST
ಶಬರಿಮಲೆ
ಶಬರಿಮಲೆ   

ತಿರುವನಂತಪುರ: ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವ ಕೋವಿಡ್‌–19 ಪಿಡುಗು, ದೇವರ ಸೇವೆಗೂ ಕಾಡಿದೆ. ಮುಂದಿನ ಒಂದು ವರ್ಷಕ್ಕೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಹುದ್ದೆಗೆ ಕರೆಯಲಾಗಿದ್ದ ಅರ್ಜಿಗೆ ಈ ಬಾರಿ ಕೇವಲ 55 ಅರ್ಚಕರು ಆಸಕ್ತಿ ತೋರಿದ್ದಾರೆ.

ಶಬರಿಮಲೆ ಪ್ರಧಾನ ಅರ್ಚಕ ಹುದ್ದೆಗೆ 55 ಅರ್ಜಿಗಳು, ಪಕ್ಕದಲ್ಲೇ ಇರುವ ಮಲಿಕಾಪುರಂ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಹುದ್ದೆಗೆ ಕೇವಲ 34 ಅರ್ಜಿಗಳು ಸಲ್ಲಿಕೆಯಾಗಿವೆ. 2019ರಲ್ಲಿ ಕ್ರಮವಾಗಿ 72 ಹಾಗೂ 61, 2018ರಲ್ಲಿ 101 ಹಾಗೂ 74 ಹಾಗೂ 2017ರಲ್ಲಿ 82 ಹಾಗೂ 51 ಅರ್ಜಿಗಳು ಈ ಎರಡೂ ದೇವಸ್ಥಾನದ ಪ್ರಧಾನ ಅರ್ಚಕ ಹುದ್ದೆಗೆ ಸಲ್ಲಿಕೆಯಾಗಿದ್ದವು.

‘ಪ್ರಸ್ತುತ ಇರುವ ಕೋವಿಡ್‌–19 ಪರಿಸ್ಥಿತಿಯೇ ಅರ್ಜಿಗಳ ಸಂಖ್ಯೆ ಇಳಿಕೆಯಾಗಲು ಕಾರಣ ಇರಬಹುದು’ ಎಂದು ತಿರುವಾಂಕೂರು ದೇವಸ್ಥಾನ ಮಂಡಳಿಯ ಅಧ್ಯಕ್ಷ ಎನ್‌.ವಾಸು ತಿಳಿಸಿದರು. ಪ್ರಮುಖ ದೇವಸ್ಥಾನಗಳಲ್ಲಿ 10 ವರ್ಷ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿರುವ 35 ರಿಂದ 60 ವರ್ಷದೊಳಗಿನ ಕೇರಳ ಬ್ರಾಹ್ಮಣರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಒಂದು ಬಾರಿ ಆಯ್ಕೆಯಾದ ಅರ್ಚಕರು ಮುಂದೆ 10 ವರ್ಷಗಳ ಕಾಲ ಅರ್ಜಿ ಸಲ್ಲಿಸುವಂತಿಲ್ಲ.

ADVERTISEMENT

ಅರ್ಜಿ ಸಲ್ಲಿಸಿರುವ ಕೆಲ ಅರ್ಚಕರು ಹೊರರಾಜ್ಯಗಳಲ್ಲಿ ಇರುವ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್‌ ಕಾರಣದಿಂದ ಮಂಡಳಿಯ ಅಧಿಕಾರಿಗಳಿಗೆ ಅಲ್ಲಿಗೆ ಹೋಗಿ ಅರ್ಚಕರ ಪೂರ್ವಾಪರಗಳ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್‌ನಲ್ಲಿ ದೇವಸ್ಥಾನದ ಆವರಣದಲ್ಲೇ ಪ್ರಧಾನ ಅರ್ಚಕರ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ವಾಸು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.