ನವದೆಹಲಿ: ಕೊರೊನಾ ಸೋಂಕು ಭೀಕರವಾಗಿದ್ದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕಾನೂನು ಧಿಕ್ಕರಿಸಿ ದೆಹಲಿಯಲ್ಲಿ ತಬ್ಲಿಗ್ ಧಾರ್ಮಿಕ ಸಭೆ ಆಯೋಜಿಸಿ, ಮುಸ್ಲಿಂ ಧಾರ್ಮಿಕ ನಾಯಕರಿಗೆ ಆಶ್ರಯ ನೀಡಲಾಗಿದೆ ಎಂದು ಆರೋಪಿಸಿ 70 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಕೈಬಿಟ್ಟಿದೆ.
2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಗ್ ಸಮಾವೇಶ ಆಯೋಜನೆಗೊಂಡಿತ್ತು. ಇದರಲ್ಲಿ ದೇಶವಿದೇಶಗಳ ಮುಸ್ಲಿಂ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು. ಧರ್ಮಪ್ರಚಾರಕರು ಒಂದೆಡೆ ಕೂಡಿದ ಕಾರಣದಿಂದ ಮತ್ತು ಆನಂತರ ದೇಶದ ವಿವಿಧ ಪ್ರಾಂತಗಳಲ್ಲಿ ಅವರು ಜನ ಸಂಪರ್ಕ ಹೊಂದಿದ ಕಾರಣದಿಂದ ಕೊರಾನಾ ವೈರಾಣು ಸೋಂಕು ದ್ವಿಗುಣಗೊಂಡಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಎಫ್‌ಐಆರ್ ರದ್ದು ಕೋರಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನೀನಾ ಬನ್ಸಲ್ ಕೃಷ್ಣ ಅವರು, ‘ಆಯೋಜಕರಿಗೆ ಅಥವಾ ಪಾಲ್ಗೊಂಡವರಿಗೆ ಕೋವಿಡ್–19 ದೃಢಪಟ್ಟ ಬಗ್ಗೆಯಾಗಲೀ ಅಥವಾ ಅಜಾಗರೂಕತೆಯಿಂದ ಸಮಾವೇಶ ಆಯೋಜಿಸಿದ್ದರ ಕುರಿತಾಗಲೀ ಅಥವಾ ಕಾನೂನು ಉಲ್ಲಂಘಿಸಿದ್ದರ ಬಗ್ಗೆಯಾಗಲೀ ಅಥವಾ ಕೋವಿಡ್–19 ಹರಡುವ ಉದ್ದೇಶದಿಂದಲೇ ಸಮಾವೇಶ ಆಯೋಜಿಸಿದ್ದರ ಕುರಿತು ಸಣ್ಣ ಅಂಶವೂ ಎಫ್‌ಐಆರ್ ಅಥವಾ ಆರೋಪಪಟ್ಟಿಯಲ್ಲಿ ಇಲ್ಲ’ ಎಂದಿದ್ದಾರೆ.
ಈ ಕುರಿತು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾ. ನೀನಾ, ‘ಇಲ್ಲಿ ನ್ಯಾಯದ ಹಿತಾಸಕ್ತಿಗಿಂತ, ಇಡೀ ಪ್ರಕ್ರಿಯೆಯನ್ನು ದೂಷಿಸುವ ಉದ್ದೇಶವಿರುವುದು ಕಂಡುಬರುತ್ತದೆ. ಹೀಗಾಗಿ ಈ ಪ್ರಕರಣವನ್ನು ಕೈಬಿಡಲಾಗಿದೆ’ ಎಂದಿದ್ದಾರೆ.
ಸುನ್ನಿ ಧಾರ್ಮಿಕ ಕಾರ್ಯಕ್ರಮವಾದ ತಬ್ಲಿಗ್ ಜಮಾತ್‌ನ ವಿದೇಶಿ ಅತಿಥಿಗಳಿಗೆ ಆಶ್ರಯ ನೀಡಿದ ಆರೋಪದಡಿ 70 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾರ್ಯಕ್ರಮ ಆಯೋಜನೆಗೊಂಡಿದ್ದ ಸಂದರ್ಭದಲ್ಲಿ ಕೋವಿಡ್–19ಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಯಲ್ಲಿತ್ತು.
ಸಭೆಯಲ್ಲಿ ಪಾಲ್ಗೊಂಡಿದ್ದವರ ಕೋವಿಡ್ ಪರೀಕ್ಷೆಯನ್ನು 2020ರ ಏ. 3ರಂದು ನಡೆಸಲಾಗಿತ್ತು. ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ವೈದ್ಯಕೀಯ ನಿಗಾದಲ್ಲಿ ಇವರನ್ನು ಐಸೊಲೇಷನ್‌ನಲ್ಲಿ ಇಡಲಾಗಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿತು.
ಎಫ್‌ಐಆರ್ ರದ್ಧತಿಗೆ ದೆಹಲಿ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಸೆಕ್ಷನ್ 144ರ ಅಡಿಯಲ್ಲಿ ಆರೋಪಿಗಳು ಕಾನೂನು ಬಾಹಿರವಾಗಿ ಜಮಾವಣೆಗೊಂಡಿದ್ದರು ಎಂದು ತೋರಿಸುವ ಯಾವುದೇ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ನ್ಯಾಯಾಲಯ ಹೇಳಿ ಪ್ರಕರಣವನ್ನು ಕೈಬಿಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.