ADVERTISEMENT

ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ: 11 ಕೋವಿಡ್ ರೋಗಿಗಳ ಸಾವು

ಮಹಾರಾಷ್ಟ್ರದ ಅಹ್ಮದ್‌ ನಗರದ ಆಸ್ಪತ್ರೆ ಐಸಿಯುನಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 22:15 IST
Last Updated 6 ನವೆಂಬರ್ 2021, 22:15 IST
ಅಗ್ನಿ ಅನಾಹುತ ನಡೆದ ಆಸ್ಪತ್ರೆಯಿಂದ ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು–ಪಿಟಿಐ ಚಿತ್ರ
ಅಗ್ನಿ ಅನಾಹುತ ನಡೆದ ಆಸ್ಪತ್ರೆಯಿಂದ ರೋಗಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು–ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರದ ಅಹ್ಮದ್‌ ನಗರದ ಜಿಲ್ಲಾ ಆಸ್ಪತ್ರೆಯತೀವ್ರ ನಿಗಾ ಘಟಕದಲ್ಲಿ (ಐಸಿಯು) ಶನಿವಾರ ಭಾರಿ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದೆ. ಕೋವಿಡ್–19 ಚಿಕಿತ್ಸೆಗೆ ದಾಖಲಾಗಿದ್ದ 11 ರೋಗಿಗಳು ಅವಘಡದಲ್ಲಿ, ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ.

ಇದು ರಾಜ್ಯದ ಆಸ್ಪತ್ರೆಗಳಲ್ಲಿ ಈ ವರ್ಷ ನಡೆದ ಆರನೇ ಅಗ್ನಿ ದುರಂತ.

ಕೋವಿಡ್–19 ಹಾಗೂ ನಂತರದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಇರಿಸಲಾಗಿದ್ದ ಐಸಿಯುನಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಸ್ಪತ್ರೆಗೆ ದೌಡಾಯಿಸಿದರು. ಮಧ್ಯಾಹ್ನ 1.30ರ ಸುಮಾರಿಗೆ ಬೆಂಕಿಯನ್ನು ಆರಿಸಲಾಯಿತು.

ADVERTISEMENT

ಘಟನೆಯಲ್ಲಿ ರೋಗಿಗಳು ಮೃತಪಟ್ಟಿರುವುದನ್ನು ಅಹ್ಮದ್ ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ದೃಢಪಡಿಸಿದ್ಧಾರೆ. ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ ಎಂದು ಅವರು ಹೇಳಿದ್ದಾರೆ.

ಐಸಿಯುನಲ್ಲಿದ್ದ 17 ಮಂದಿ ಪೈಕಿ 11 ಮಂದಿ ಮೃತಪಟ್ಟಿದ್ದು, ಗಾಯಗೊಂಡ ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಎರಡು ಐಸಿಯುಗಳಿವೆ. ಎರಡನೇ ಮಹಡಿಯಲ್ಲಿ ಅವಘಡ ನಡೆದಿದೆ.ಬೆಂಕಿ ಕಾಣಿಸಿಕೊಂಡ ತಕ್ಷಣ, ಗಾಯಗೊಂಡ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಪಕ್ಕದ ವಾರ್ಡ್‌ಗಳಲ್ಲಿದ್ದ ರೋಗಿಗಳನ್ನೂ ಸ್ಥಳಾಂತರ ಮಾಡಲಾಯಿತು.

ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎಂದು ಶಂಕಿಸಲಾಗಿದೆ ಎಂದು ಅಹಮದ್‌ ನಗರ ಪಾಲಿಕೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಂಕರ್ ಮಿಸಾಲ್ ಹೇಳಿದ್ಧಾರೆ. ‘ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಉಸಿರುಗಟ್ಟುವಿಕೆ ಅಥವಾ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿನ ಅಡಚಣೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದಿದ್ದಾರೆ.

‘ಮೃತರಲ್ಲಿ ಬಹುತೇಕರು ಹಿರಿಯ ನಾಗರಿಕರಾಗಿದ್ದು, ಕೋವಿಡ್ ನಂತರದ ಚಿಕಿತ್ಸೆ ಪಡೆಯುತ್ತಿದ್ದರು. ಎಲ್ಲರೂ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.ಪೊಲೀಸ್ ಪಂಚನಾಮೆ ಪೂರ್ಣಗೊಂಡ ನಂತರ ವಿದ್ಯುತ್ ತಪಾಸಣಾ ವಿಭಾಗವು ವಿಚಾರಣೆಯನ್ನು ಆರಂಭಿಸುತ್ತದೆ ಎಂದು ಇಂಧನ ಸಚಿವ ಡಾ. ನಿತಿನ್ ರಾವುತ್ ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡು, 15 ಕೋವಿಡ್ ರೋಗಿಗಳು ಮೃತಪಟ್ಟಿದ್ದರು. ಕೋವಿಡ್ ಆಸ್ಪತ್ರೆಯನ್ನು ಹೊಂದಿದ್ದ ಮುಂಬೈನ ಭಾಂಡುಪ್‌ನಲ್ಲಿರುವ ಡ್ರೀಮ್ಸ್ ಮಾಲ್‌ನಲ್ಲಿ ಮಾರ್ಚ್‌ನಲ್ಲಿ ಸಂಭವಿಸಿದ ಮತ್ತೊಂದು ಬೆಂಕಿ ಅವಘಡದಲ್ಲಿ 9 ರೋಗಿಗಳು ಅಸುನೀಗಿದ್ದರು.

ತನಿಖೆಗೆ ಠಾಕ್ರೆ ಆದೇಶ:

ಅಹ್ಮದ್‌ ನಗರದ ಆಸ್ಪತ್ರೆಯಲ್ಲಿ ಕೋವಿಡ್‌–19ಗೆ ಚಿಕಿತ್ಸೆ ಪಡೆಯುತ್ತಿದ್ದ 11 ರೋಗಿಗಳ ಜೀವವನ್ನು ಆಹುತಿ ಪಡೆದ ಅಗ್ನಿ ಅವಘಡದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಆದೇಶಿಸಿದ್ದಾರೆ. ವಿಭಾಗೀಯ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ವರದಿ ಸಲ್ಲಿಸಲು ಒಂದು ವಾರ ಸಮಯ ನೀಡಲಾಗಿದೆ.

ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು, ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಮೃತರ ಕುಟುಂಬ ಸದಸ್ಯರಿಗೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.ಗಾಯಾಳು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅವರು ನಿರ್ದೇಶಿಸಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.