ADVERTISEMENT

ಸೆ. 5ರೊಳಗೆ ಎಲ್ಲ ಶಿಕ್ಷಕರಿಗೆ ಲಸಿಕೆ: ರಾಜ್ಯಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 20:15 IST
Last Updated 25 ಆಗಸ್ಟ್ 2021, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ‘ಶಿಕ್ಷಕರಿಗೆ ಆದ್ಯತೆಯ ಮೇಲೆ ಕೋವಿಡ್‌ ಲಸಿಕೆ ನೀಡಬೇಕು. ಶಿಕ್ಷಕರ ದಿನಾಚರಣೆಗೂ (ಸೆ. 5) ಮುನ್ನ ಎಲ್ಲ ಶಿಕ್ಷಕರಿಗೆ ಲಸಿಕೆ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ ಬುಧವಾರ ತಿಳಿಸಿದ್ದಾರೆ.

‘ಈ ಉದ್ದೇಶಕ್ಕಾಗಿ ಈ ತಿಂಗಳು ರಾಜ್ಯಗಳಿಗೆ ಹೆಚ್ಚುವರಿಯಾಗಿ 2 ಕೋಟಿಗೂ ಅಧಿಕ ಡೋಸ್‌ ಲಸಿಕೆ ಪೂರೈಸಲಾಗುವುದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಇಳಿಕೆ ಕಂಡು ಬರುತ್ತಿರುವ ಕಾರಣ, ಶಾಲೆಗಳನ್ನು ಆರಂಭಿಸಲು ಕೆಲವು ರಾಜ್ಯಗಳು ಕ್ರಮ ಕೈಗೊಂಡಿವೆ. ಆದರೆ, ಎಲ್ಲ ಶಿಕ್ಷಕರಿಗೆ ಕೋವಿಡ್‌ ಲಸಿಕೆ ನೀಡುವುದು ಸಾಧ್ಯವಾಗದೇ ಇರುವ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಹೇಳಿಕೆಗೆ ಮಹತ್ವ ಬಂದಿದೆ.

ADVERTISEMENT

‘ಈವರೆಗೆ ದೇಶದಲ್ಲಿ 60 ಕೋಟಿಗೂ ಅಧಿಕ ಡೋಸ್‌ಗಳಷ್ಟು ಕೋವಿಡ್‌ ಲಸಿಕೆ ಹಾಕಲಾಗಿದೆ’ ಎಂದೂ ಸಚಿವರು ತಿಳಿಸಿದ್ದಾರೆ.

‘85 ದಿನಗಳ ಅವಧಿಯಲ್ಲಿ 10 ಕೋಟಿ ಡೋಸ್‌ ಲಸಿಕೆ ಹಾಕಲಾಗಿತ್ತು. 45 ದಿನಗಳಲ್ಲಿ 20 ಕೋಟಿ ಡೋಸ್‌ ಗಡಿ ದಾಟಲಾಗಿತ್ತು. ನಂತರದ 29 ದಿನಗಳ ಅವಧಿಯಲ್ಲಿ ಈ ಪ್ರಮಾಣ 30 ಕೋಟಿ ತಲುಪಿತ್ತು’ ಎಂದು ಮಾಹಿತಿ ನೀಡಿದ್ದಾರೆ.

‘30 ಕೋಟಿ ಡೋಸ್‌ಗಳಿಂದ 40 ಕೋಟಿ ಡೋಸ್‌ಗಳ ಹಂತವನ್ನು 24 ದಿನಗಳಲ್ಲಿ ತಲುಪಿದ್ದರೆ, ನಂತರದ 20 ದಿನಗಳ ಅವಧಿಯಲ್ಲಿ 50 ಕೋಟಿಗೂ ಅಧಿಕ ಡೋಸ್‌ಗಳಷ್ಟು ಲಸಿಕೆ ಹಾಕುವ ಮೂಲಕ ಸಾಧನೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಸಭೆ: ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಅವರು ಬುಧವಾರ ಎಲ್ಲ ರಾಜ್ಯ
ಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.