ADVERTISEMENT

ಕೋವಿಡ್: ಆರ್‌ಟಿ–ಪಿಸಿಆರ್ ಪರೀಕ್ಷೆಗೆ ₹400 ಗರಿಷ್ಠ ಶುಲ್ಕ ನಿಗದಿಪಡಿಸಿದ ಒಡಿಶಾ

ಪಿಟಿಐ
Published 2 ಡಿಸೆಂಬರ್ 2020, 17:14 IST
Last Updated 2 ಡಿಸೆಂಬರ್ 2020, 17:14 IST
ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿರುವುದು–ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಿರುವುದು–ಸಾಂದರ್ಭಿಕ ಚಿತ್ರ   

ಭುವನೇಶ್ವರ: ಕೋವಿಡ್‌–19 ಪತ್ತೆ ಮಾಡಲು ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ವಿಧಾನ 'ಆರ್‌ಟಿ–ಪಿಸಿಆರ್‌' ಪರೀಕ್ಷೆಗೆ ಒಡಿಶಾ ಸರ್ಕಾರ ಗರಿಷ್ಠ ಶುಲ್ಕ ಮಿತಿ ನಿಗದಿ ಪಡಿಸಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ₹400 ನಿಗದಿಯಾಗಿದೆ.

ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, 'ರಾಜ್ಯದಲ್ಲಿ ಖಾಸಗಿ ಪ್ರಯೋಗಗಳಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗುವವರು ಜಿಎಸ್‌ಟಿ ಸಹಿತ ಗರಿಷ್ಠ ₹400 ಪಾವತಿಸಬಹುದು' ಎಂದು ತಿಳಿಸಿದೆ. ಇದು ಈ ಪರೀಕ್ಷೆಗೆ ನಿಗದಿಯಾಗಿರುವ ಅತಿ ಕಡಿಮೆ ಶುಲ್ಕವಾಗಿದೆ.

ಪರೀಕ್ಷೆಗೆ ಬಳಸುವ ಕಿಟ್‌ ಮತ್ತು ಇತರೆ ಸಲಕರಣೆಗಳಿಗೆ ತಗುಲುವ ವೆಚ್ಚ ಕಡಿಮೆಯಾಗಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 'ಹಿಂದೆ ₹1,200 ಇದ್ದ ಆರ್‌ಟಿ–ಪಿಸಿಆರ್‌ ಕಿಟ್‌ ಈಗ ₹46ಕ್ಕೆ ಲಭ್ಯವಿದೆ. ಆರ್‌ಎನ್‌ಎ ಎಕ್ಸ್‌ಟ್ರಾಕ್ಷನ್‌ ಕಿಟ್‌ ಬೆಲೆಯೂ ಕಡಿಮೆಯಾಗಿದ್ದು, ಪ್ರಯೋಗಾಲಯಗಳು ಒಂದು ಪರೀಕ್ಷೆಗಾಗಿ ಬಳಸುವ ಸಾಧನ, ಸಲಕರಣೆಗಳಿಗೆ ಗರಿಷ್ಠ ₹200 ಖರ್ಚು ಮಾಡುತ್ತಿವೆ' ಎಂದಿದ್ದಾರೆ.

ADVERTISEMENT

ಆರಂಭದಲ್ಲಿ ಖಾಸಗಿ ಪ್ರಯೋಗಾಲಯಗಳು ಹಾಗೂ ಆಸ್ಪತ್ರೆಗಳಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ₹4,500 ಶುಲ್ಕ ವಿಧಿಸಲಾಗುತ್ತಿತ್ತು. ಜುಲೈನಲ್ಲಿ ಗರಿಷ್ಠ ಶುಲ್ಕ ₹2,200 ನಿಗದಿ ಪಡಿಸಲಾಯಿತು ಹಾಗೂ ಆಗಸ್ಟ್‌ನಲ್ಲಿ ₹1,200ಕ್ಕೆ ಇಳಿಕೆ ಮಾಡಲಾಯಿತು.

ಒಡಿಶಾದಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸುವ ಐಸಿಎಂಆರ್‌ ಅನುಮೋದಿಸಿತ ನಾಲ್ಕು ಪ್ರಯೋಗಾಲಯಗಳಿವೆ. ಸರ್ಕಾರಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಕೋವಿಡ್‌–19 ಪರೀಕ್ಷೆ ನಡೆಸಲಾಗುತ್ತಿದೆ. ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಶುಲ್ಕವನ್ನೂ ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ರ್‍ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಪ್ರಸ್ತುತ ₹450 ಪಡೆಯಲಾಗುತ್ತಿದೆ.

ಖಾಸಗಿ ಪ್ರಯೋಗಾಲಯಗಳಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರ್ಕಾರ ₹700 ಮಿತಿ ನಿಗದಿ ಪಡಿಸಿದೆ, ದೆಹಲಿ, ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ₹800 ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.