ADVERTISEMENT

ಕೋಲ್ಕತ್ತ: ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರಿಗೆ ಮನೆಯಲ್ಲೇ ಕೋವಿಡ್‌ ಲಸಿಕೆ

ಪಿಟಿಐ
Published 1 ಆಗಸ್ಟ್ 2021, 9:10 IST
Last Updated 1 ಆಗಸ್ಟ್ 2021, 9:10 IST
ಕೋಲ್ಕತ್ತದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ–ಸಾಂದರ್ಭಿಕ ಚಿತ್ರ
ಕೋಲ್ಕತ್ತದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ–ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಮನೆಗಳಲ್ಲಿಯೇ ಕೋವಿಡ್‌–19 ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಕೋಲ್ಕತ್ತ ಮುನ್ಸಿಪಲ್‌ ಕಾರ್ಪೊರೇಷನ್‌ (ಕೆಎಂಸಿ) ಮುಂದಾಗಿದೆ.

ಕೋಲ್ಕತ್ತದ ನಿವಾಸಿಗಳಲ್ಲಿ 80 ವರ್ಷ ಮತ್ತು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಹಲವು ಜನರು ಹಾಗೂ ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವವರು ಕೋವಿಡ್‌ ಲಸಿಕೆ ಕೇಂದ್ರಗಳಿಗೆ ತೆರಳಲು ಸಾಧ್ಯವಾಗಿಲ್ಲ. ಅಂತಹ ವ್ಯಕ್ತಿಗಳಿಗೆ ಲಸಿಕೆ ಹಾಕುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಫರ್ಹಾದ್‌ ಹಕೀಮ್‌ ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಬೇಕಿರುವ ವ್ಯಕ್ತಿಯ ಪರವಾಗಿ ಮನೆಯ ಯಾವುದೇ ಸದಸ್ಯ ಸಮೀಪದ ಲಸಿಕೆ ಕೇಂದ್ರದಲ್ಲಿ ಅವರ ಹೆಸರು ನೋಂದಾಯಿಸಬೇಕಾಗುತ್ತದೆ. ಲಸಿಕೆ ಪಡೆಯಬೇಕಿರುವ ಅನಾರೋಗ್ಯ ಪೀಡಿತ ವ್ಯಕ್ತಿ ಅಥವಾ ಹಿರಿಯ ನಾಗರಿಕರನ್ನು ಹೊರತು ಪಡಿಸಿ ಮನೆಯ ಉಳಿದ ಸದಸ್ಯರು ಲಸಿಕೆ ಹಾಕಿಸಿಕೊಂಡಿರಬೇಕು. ಅಂತಹ ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಲಸಿಕೆ ಹಾಕುವುದಾಗಿ ತಿಳಿಸಿದ್ದಾರೆ.

ADVERTISEMENT

ಹಿರಿಯ ನಾಗರಿಕರು ಮತ್ತು ಮನೆಯಿಂದ ಹೊರ ಬರಲು ಸಾಧ್ಯವಾಗದ ವ್ಯಕ್ತಿಗಳಿಗಾಗಿಯೇ ನಡೆಸುತ್ತಿರುವ ಲಸಿಕೆ ಅಭಿಯಾನ ಇದಾಗಿದ್ದು, ರಾಜ್ಯದ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಲಸಿಕೆ ಕಾರ್ಯಕ್ರಮ ಶುರುವಾಗಲಿದೆ ಎಂದು ಹಕೀಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.