ADVERTISEMENT

ಕೋವಿಡ್‌: ಕೋವಿಶೀಲ್ಡ್‌ನಿಂದ ಶೇ 93ರಷ್ಟು ರಕ್ಷಣೆ

ಮರಣ ಪ್ರಮಾಣದಲ್ಲಿ ಶೇ 98ರಷ್ಟು ಇಳಿಕೆ: ನೀತಿ ಆಯೋಗದ ಸದಸ್ಯ ಪಾಲ್‌ ಹೇಳಿಕೆ

ಪಿಟಿಐ
Published 27 ಜುಲೈ 2021, 19:30 IST
Last Updated 27 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಶೀಲ್ಡ್‌ ಲಸಿಕೆ ಕೋವಿಡ್‌–19 ವಿರುದ್ಧ ಶೇ 93ರಷ್ಟು ರಕ್ಷಣೆ ನೀಡುವುದು ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.

ಕೋವಿಡ್‌ನಿಂದಾಗಿ ಮರಣ ಪ್ರಮಾಣದಲ್ಲಿ ಈ ಲಸಿಕೆಯಿಂದಾಗಿ ಶೇ 98ರಷ್ಟು ಇಳಿಕೆ ಕಂಡುಬಂದಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್‌ ಪಿಡುಗಿನ 2ನೇ ಅಲೆ ಸಂದರ್ಭದಲ್ಲಿ ಎಎಫ್‌ಎಂಸಿ ಈ ಅಧ್ಯಯನ ಕೈಗೊಂಡಿತ್ತು. ಕೋವಿಶೀಲ್ಡ್‌ ಲಸಿಕೆ ನೀಡಲಾಗಿದ್ದ ವೈದ್ಯರು ಹಾಗೂ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಸೇರಿ 15 ಲಕ್ಷ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು’ ಎಂದು ಅವರು ಹೇಳಿದರು.

ADVERTISEMENT

‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೊರೊನಾ ಸೋಂಕಿನ ತೀವ್ರತೆಯನ್ನು ಲಸಿಕೆ ಕಡಿಮೆ ಮಾಡುತ್ತದೆ. ಆದರೆ, ಲಸಿಕೆ ಹಾಕಿಸಿಕೊಳ್ಳುವುದು ಎಂದರೆ, ಸೋಂಕು ತಗುಲುವುದಿಲ್ಲ ಎಂಬ ಖಾತ್ರಿಯೇನಲ್ಲ’ ಎಂದು ಅವರು ಪುನರುಚ್ಚರಿಸಿದರು.

‘ಲಸಿಕೆ ಹಾಕಿಸಿಕೊಂಡ ನಂತರವೂ ಸೋಂಕು ತಗುಲಿದರೆ, ಅದು ತೀವ್ರಸ್ವರೂಪದ ಕಾಯಿಲೆಯಾಗದಂತೆ ಲಸಿಕೆ ತಡೆಯುತ್ತದೆ’ ಎಂದು ಪಾಲ್‌ ಹೇಳಿದರು.

‘ದೇಶದಲ್ಲಿ ಉತ್ಪಾದನೆಯಾಗಿರುವ ಲಸಿಕೆಗಳ ಮೇಲೆ ನಂಬಿಕೆ ಇಡುವಂತೆ ಹಾಗೂ ಬರುವ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಜನರಲ್ಲಿ ಕೇಳಿಕೊಳ್ಳುವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.