ADVERTISEMENT

ಗೋಹತ್ಯೆ ಆರೋಪ: ಉತ್ತರ ಪ್ರದೇಶದಲ್ಲಿ ಗುಂಪು ಗಲಭೆ; ಇನ್‌ಸ್ಪೆಕ್ಟರ್‌, ಯುವಕ ಸಾವು

ಏಜೆನ್ಸೀಸ್
Published 3 ಡಿಸೆಂಬರ್ 2018, 17:56 IST
Last Updated 3 ಡಿಸೆಂಬರ್ 2018, 17:56 IST
   

ಲಖನೌ:ದನಗಳ ಹತ್ಯೆ ನಡೆದಿದೆ ಎಂದು ಆರೋಪಿಸಿದ ಗುಂಪೊಂದುಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸ್‌ ಅಧಿಕಾರಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಮೀಪದ ಕಬ್ಬಿನ ಹೊಲವೊಂದರಲ್ಲಿ ಸಿಕ್ಕಿದೆ ಎನ್ನಲಾದ ಪ್ರಾಣಿಗಳ ಎಲುಬುಗಳು ಈ ಸಂಘರ್ಷಕ್ಕೆ ಕಾರಣ. ಇಲ್ಲಿ ದನಗಳ ಹತ್ಯೆ ನಡೆದಿದೆ, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಗುಂಪು ಪೊಲೀಸ್‌ ಹೊರಠಾಣೆಗೆ ಮುತ್ತಿಗೆ ಹಾಕಿತು. ಹೊಲದಿಂದ ಸಂಗ್ರಹಿಸಿ ತಂದ ಎಲುಬುಗಳನ್ನು ಠಾಣೆಯ ಹೊರಗಿನ ರಸ್ತೆಯಲ್ಲಿ ಸುರಿಯಿತು.

ಹೊರಠಾಣೆಗೆ ಮುತ್ತಿಗೆ ಹಾಕಿದ ಗುಂಪಿನಲ್ಲಿ 400ಕ್ಕೂ ಹೆಚ್ಚು ಜನರಿದ್ದರು. ಕೆಲವೇ ಕೆಲವು ಪೊಲೀಸರು ಮಾತ್ರ ಆಗ ಅಲ್ಲಿ ಇದ್ದರು. ಜನರ ಗುಂಪನ್ನು ಬಲ ಪ‍್ರಯೋಗಿಸಿ ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಸುಮಿತ್‌ ಕುಮಾರ್‌ ಎಂಬ ಯುವಕ ಮೃತಪಟ್ಟರು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಆನಂದ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಇದರಿಂದ ಗುಂಪು ಕೆರಳಿತು. ಹೊರಠಾಣೆಯ ಮೇಲೆ ದಾಳಿ ನಡೆಸಿತು. ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿತು. ಪೊಲೀಸರತ್ತ ಗುಂಡು ಹಾರಾಟ ನಡೆಸಿತು. ದಾಳಿಯ ಮಾಹಿತಿ ತಿಳಿದು ಸಯನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಸುಬೋಧ್‌ ಸಿಂಗ್‌ ಸ್ಥಳಕ್ಕೆ ಧಾವಿಸಿದರು. ಅವರನ್ನು ಎಳೆದಾಡಿದ ಗುಂಪು ಮನಸೋ ಇಚ್ಛೆ ಥಳಿಸಿತು ಎಂದು ಮೂಲಗಳು ತಿಳಿಸಿವೆ. ಸಿಂಗ್‌ಗೆ ಗುಂಡು ಕೂಡ ತಗುಲಿದೆ ಎಂದು ಕೆಲವು ವರದಿಗಳು ಹೇಳಿವೆ. ಸಮೀಪದ ಆಸ್ಪತ್ರೆಗೆ ಅವರನ್ನು ಒಯ್ಯಲಾಯಿತು. ಆದರೆ, ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಆತಂಕದ ಕ್ಷಣಗಳು

ಈ ಹೊಲದಲ್ಲಿ ಹಿಂದೆಯೂ ಪ್ರಾಣಿಗಳ ಎಲುಬುಗಳು ಸಿಕ್ಕಿದ್ದವು. ಆಗಲೂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದಿರುವುದು ‘ಗೋರಕ್ಷಕ’ರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಮುಸ್ಲಿಂ ಸಮುದಾಯದ ಧಾರ್ಮಿಕ ಕಾರ್ಯಕ್ರಮವೊಂದು ಸಮೀಪದಲ್ಲಿಯೇ ನಡೆಯುತ್ತಿತ್ತು. ಅಲ್ಲಿ ಸಾವಿರಾರು ಮಂದಿ ಸೇರಿದ್ದರು. ಹಾಗಾಗಿ ಆತಂಕದ ಕ್ಷಣಗಳು ನಿರ್ಮಾಣವಾದವು. ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಜನರನ್ನು ಹೊತ್ತ ವಾಹನಗಳನ್ನು ಪೊಲೀಸರು ಬೇರೆ ಮಾರ್ಗದಲ್ಲಿ ಕಳುಹಿಸಿದರು.

(ವಿಡಿಯೊ: ದಿ ಹಿಂದು ವರದಿಗಾರನ ಟ್ವಿಟರ್‌ ಖಾತೆಯಿಂದ)

’ಸುಮಾರು 400 ಜನರು ಪ್ರಾಣಿಗಳ ಪಳೆಯುಳಿಕೆಗಳನ್ನು ಟ್ರ್ಯಾಕ್ಟರ್‌ ಟ್ರಾಲಿಗಳಲ್ಲಿ ತುಂಬಿಕೊಂಡು ಬಂದಿದ್ದರು.ಕಲ್ಲು ತೂರಾಟ ಪ್ರಾರಂಭಿಸಿದರು. ಇನ್‌ಸ್ಪೆಕ್ಟರ್‌ ತಲೆಗೆ ಕಲ್ಲಿನಿಂದ ಪೆಟ್ಟಾಯಿತು ಹಾಗೂ ಹಲವು ಪೊಲೀಸರೂ ಸಹ ಗಾಯಗೊಂಡರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಆನಂದ್ ಕುಮಾರ್‌ ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಕುಪಿತರಾದ ಗುಂಪು ಠಾಣೆಯ ಮೇಲೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವುದು ಸೆಲ್‌ಫೋನ್‌ ವಿಡಿಯೊವೊಂದರಲ್ಲಿ ದಾಖಲಾಗಿದೆ. ವರದಿಗಳ ಪ್ರಕಾರ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಪ್ರಹಾರ ನಡೆಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಗಾಯಗೊಂಡಿದ್ದ ಪೊಲೀಸ್‌ ಇನ್‌ಸ್ಟೆಕ್ಟರ್‌ರನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾರೆ.

(ವಿಡಿಯೊ: ದಿ ಹಿಂದು ವರದಿಗಾರನ ಟ್ವಿಟರ್‌ ಖಾತೆಯಿಂದ)

ಇಬ್ಬರು ಪ್ರತಿಭಟನಾ ನಿರತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಿಮಾಂಶು ಮಿತ್ತಲ್‌ ಹೇಳಿದ್ದಾರೆ. ಒಬ್ಬ ಬಿಜೆಪಿ ಕಾರ್ಯತನೆಂದು ಗುರುತಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಹಾಗೂ ಸುಮೀತ್‌ ಹೆಸರಿನ ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿರುವುದಾಗಿ ದಿ ಹಿಂದು ವರದಿ ಮಾಡಿದೆ.

(ವಿಡಿಯೊ: ಹಿಂದುಸ್ತಾನ್‌ಟೈಮ್ಸ್‌ವರದಿಗಾರನ ಟ್ವಿಟರ್‌ ಖಾತೆಯಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.