
ನವದೆಹಲಿ: ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ 2005ರ ಮರುಪರಿಶೀಲನೆಗೆ ಕರೆ ನೀಡಿರುವ ಈಚಿನ ಆರ್ಥಿಕ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಸಿಪಿಐನ ರಾಜ್ಯಸಭಾ ಸಂಸದ ಪಿ. ಸಂದೋಷ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
‘ಆಂತರಿಕ ಚರ್ಚೆಗಳನ್ನು ರಕ್ಷಿಸಲಿಕ್ಕಾಗಿ ಆರ್‌ಟಿಐ ಕಾಯ್ದೆಯ ಮರುಪರಿಶೀಲನೆಯ ಅಗತ್ಯವಿರುವ ಸಲಹೆಯು, ಭ್ರಷ್ಟಾಚಾರವನ್ನು ನ್ಯಾಯಸಮ್ಮತಗೊಳಿಸುವ ಮತ್ತು ಆಡಳಿತಾತ್ಮಕ ದಕ್ಷತೆಯ ಸೋಗಿನಲ್ಲಿ ತಪ್ಪುಗಳನ್ನು ರಕ್ಷಿಸುವ ಅಪಾಯವನ್ನು ಎದುರಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಡಪಕ್ಷಗಳ ನಿರ್ಣಾಯಕ ಬೆಂಬಲದೊಂದಿಗೆ ಯುಪಿಎ–1 ಸರ್ಕಾರ ಜಾರಿಗೆ ತಂದ ಆರ್‌ಟಿಐ ಕಾಯ್ದೆಯು, ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯನ್ನು ಸಾಂಸ್ಥಿಕಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ.
‘ನಾಗರಿಕರ ಸಬಲೀಕರಣ, ಭ್ರಷ್ಟಾಚಾರ ನಿಗ್ರಹಿಸುವುದು ಪ್ರಜ್ಞಾಪೂರ್ವಕ ರಾಜಕೀಯ ಆಯ್ಕೆಯಾಗಿದೆ. ಇದರ ಚೈತನ್ಯವನ್ನೇ ದುರ್ಬಲಗೊಳಿಸುವ ಪ್ರಯತ್ನವು ಸಾಂವಿಧಾನಿಕ ಆಡಳಿತದ ಆಶಯವನ್ನೇ ಬುಡಮೇಲುಗೊಳಿಸಲಿದೆ’ ಎಂದಿದ್ದಾರೆ.
‘ಪ್ರಜಾಪ್ರಭುತ್ವ ಆಡಳಿತವು ಮುಕ್ತತೆಯಿಂದ ಬಳಲುತ್ತಿಲ್ಲ. ಇದು ಗೋಪ್ಯತೆ, ಅನಿಯಂತ್ರಿತತೆ ಮತ್ತು ಗೋಚರಿಸದ ಪ್ರಭಾವದಿಂದ ಬಳಲುತ್ತಿದೆ. ಕಳೆದ ದಶಕದಲ್ಲೇ ಆರ್‌ಟಿಐ ಕಾಯ್ದೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಮತ್ತಷ್ಟು ದುರ್ಬಲಗೊಳಿಸುವಿಕೆಯು ಪ್ರಜಾಪ್ರಭುತ್ವದ ಹೊಣೆಗಾರಿಕೆ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿಕಾರಕವಾಗಿದೆ’ ಎಂದಿರುವ ಸಂದೋಷ್, ಈ ನಿಲುವನ್ನು ಮರುಪರಿಶೀಲಿಸಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.