ADVERTISEMENT

ಮಣಿಪುರ ಸಂಘರ್ಷ ಶಮನಕ್ಕೆ ರಾಜಕೀಯ ಪರಿಹಾರವೊಂದೇ ಮಾರ್ಗ: ಸಿಪಿಎಂ ನಿಯೋಗ

ಮಣಿಪುರ ರಾಜ್ಯಪಾಲೆ ಭೇಟಿಯಾದ ಸಿತಾರಾಂ ಯೆಚೂರಿ ನೇತೃತ್ವದ ಸಿಪಿಎಂ ನಿಯೋಗ

ಪಿಟಿಐ
Published 19 ಆಗಸ್ಟ್ 2023, 13:12 IST
Last Updated 19 ಆಗಸ್ಟ್ 2023, 13:12 IST
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ   

ಇಂಫಾಲ್‌ : ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗವು ಮಣಿಪುರದ ರಾಜ್ಯ‍ಪಾಲೆ ಅನುಸೂಯಾ ಉಯಿಕೆ ಅವರನ್ನು ಇಲ್ಲಿನ ರಾಜಭವನದಲ್ಲಿ ಭೇಟಿಯಾಗಿ, ಸದ್ಯ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಆಂತರಿಕವಾಗಿ ಸ್ಥಳಾಂತರವಾದ ಜನರ (ಐಡಿಪಿಎಸ್‌) ಪರಿಸ್ಥಿತಿಯ ಕುರಿತು ಚರ್ಚಿಸಿತು.

ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಮಣಿಪುರದ ಪರಿಸ್ಥಿತಿ ಅವಲೋಕಿಸಲು ರಾಜ್ಯಕ್ಕೆ ಮೂರು ದಿನಗಳ ಭೇಟಿ ಕೈಗೊಂಡಿರುವ ಸಿಪಿಎಂ ನಿಯೋಗದ ತಂಡವು, ಚುರಾಚಂದ್‌ಪುರ ಮತ್ತು ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರಗಳಿಗೆ ಶುಕ್ರವಾರ ಭೇಟಿ ಕೊಟ್ಟಿತ್ತು. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುತ್ತಿರುವ ಪರಿಹಾರ ಶಿಬಿರಗಳಲ್ಲಿ ವ್ಯವಸ್ಥೆಗಳು ತೃಪ್ತಿಕರವಾಗಿಲ್ಲ ಎಂದು ಯೆಚೂರಿ, ಉಯಿಕೆ ಅವರಿಗೆ ತಿಳಿಸಿರುವುದಾಗಿ ರಾಜ್ಯಪಾಲರ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

‘ಐಡಿಪಿಗಳು, ವಿಶೇಷವಾಗಿ ಮಕ್ಕಳು ಮತ್ತು ಹಾಲುಣಿಸುವ ತಾಯಂದಿರು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ಶಿಬಿರಗಳಲ್ಲಿ ಶಿಶುಗಳು ಜನಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಐಡಿಪಿಗಳು ಎಷ್ಟು ದಿನ ಭರವಸೆಯೊಂದಿಗೆ ಬದುಕಬಲ್ಲರು’ ಎಂದೂ ಯೆಚೂರಿ ಪ್ರಶ್ನಿಸಿದ್ದಾರೆ.

ADVERTISEMENT

ವಿವಿಧ ಪೊಲೀಸ್ ಠಾಣೆಗಳಿಂದ ಬಂದೂಕುಗಳ ಲೂಟಿ ಆಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಯೆಚೂರಿ, ಸದ್ಯದ ಬಿಕ್ಕಟ್ಟನ್ನು ರಾಜಕೀಯ ಪರಿಹಾರದಿಂದ ಮಾತ್ರ ಶಮನಗೊಳಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

‘ಹಿಂಸಾಚಾರದಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಹಿಂಸಾಚಾರ ಬಿಟ್ಟು, ಮಾತುಕತೆಗೆ ಮುಂದಾಗುವಂತೆ ಎರಡೂ ಸಮುದಾಯಗಳಿಗೆ ಮನವಿ ಮಾಡಲಾಗಿದೆ’ ಎಂದು ಉಯಿಕೆ ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರದ ಇತರ ನಾಯಕರನ್ನು ಖುದ್ದು ಭೇಟಿ ಮಾಡಿದ್ದು, ಸಾಧ್ಯವಾದಷ್ಟು ಶೀಘ್ರ ಸಂಘರ್ಷ ಅಂತ್ಯಗೊಳಿಸಲು ಮಾರ್ಗಗಳನ್ನು ಕಂಡುಕೊಳ್ಳುವಂತೆ ಒತ್ತಾಯಿಸಿರುವುದಾಗಿ ರಾಜ್ಯಪಾಲರು ಸಿಪಿಎಂ ನಿಯೋಗಕ್ಕೆ ಮಾಹಿತಿ ನೀಡಿದರು ಎಂದು ಹೇಳಿಕೆಯಲ್ಲಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.