ADVERTISEMENT

ಕಾರ್ಮಿಕ ಸಂಘಟನೆ ಮುಖಂಡ, ಸಿಪಿಐ(ಎಂ) ನಾಯಕ ಶತಾಯುಷಿ ಚಂದ್ರಶೇಖರ್ ಬಸು ನಿಧನ

ಏಜೆನ್ಸೀಸ್
Published 16 ಜನವರಿ 2026, 9:33 IST
Last Updated 16 ಜನವರಿ 2026, 9:33 IST
<div class="paragraphs"><p>ಚಂದ್ರಶೇಖರ್ ಬಸು</p></div>

ಚಂದ್ರಶೇಖರ್ ಬಸು

   

ಕೋಲ್ಕತ್ತ: ರಾಷ್ಟ್ರೀಯ ಕಾರ್ಮಿಕ ಸಂಘಟನೆ ಹಿರಿಯ ಮುಖಂಡ ಹಾಗೂ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯ ಚಂದ್ರಶೇಖರ್ ಬಸು ಶುಕ್ರವಾರ ನಿಧನರಾದರು.

ಅವರಿಗೆ 103 ವರ್ಷ ವಯಸ್ಸಾಗಿತ್ತು.

ADVERTISEMENT

ಇಲ್ಲಿನ ಬಿಧಾನ್‌ನಗರದಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ ನಿಧನರಾದರು ಎಂದು  ಸಿಪಿಐ(ಎಂ) ಪಕ್ಷದ ಮೂಲಗಳು ತಿಳಿಸಿವೆ.

ಶತಾಯುಷಿಯಾಗಿದ್ದ ಚಂದ್ರಶೇಖರ್ ಬಸು ಅವರು ಪುತ್ರ, ಸೊಸೆ ಹಾಗೂ ಮೊಮ್ಮಗನನ್ನು ಅಗಲಿದ್ದಾರೆ.

ಕಲ್ಕತ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ ಅವರು ಎಡಪಂಥೀಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1944ರಲ್ಲಿ ಹಿಂದೂಸ್ತಾನ್ ವಿಮಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ನಂತರ ಅಖಿಲ ಭಾರತ ವಿಮಾ ಉದ್ಯೋಗಿಗಳ ಸಂಘಟನೆಯ ಸದಸ್ಯತ್ವ ಪಡೆದು ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಅವರು ಸಿಪಿಐ (ಅವಿಭಜಿತ) ಪಕ್ಷದ ಸದಸ್ಯರಾಗಿ ಜೀವನಪೂರ್ತಿ ಆ ಸದಸ್ಯತ್ವವನ್ನು ಉಳಿಸಿಕೊಂಡಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಮಾ ಕ್ಷೇತ್ರದ ರಾಷ್ಟ್ರೀಕರಣ ಸೇರಿ ಅಖಿಲ ಭಾರತ ಮಟ್ಟದಲ್ಲಿ ವಿಮಾ ಉದ್ಯೋಗಿಗಳನ್ನು ಸಂಘಟಿಸುವಲ್ಲಿ ಬಸು ಅವರು ಮಹತ್ವದ ಪಾತ್ರ ವಹಿಸಿದ್ದರು. ಹತ್ತು ದಿನಗಳ ಹಿಂದಷ್ಟೆ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ವಿಮಾ ಉದ್ಯೋಗಿಗಳ ಸಮ್ಮೇಳನದಲ್ಲಿ ಎರಡು ದಿನಗಳ ಕಾಲ ಪ್ರತಿನಿಧಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.

ಎಡಪಕ್ಷಗಳ ನಾಯಕ ಅಧ್ಯಕ್ಷ ಬಿಮಾನ್ ಬೋಸ್ ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಬಸು ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ವಿಮಾ ಉದ್ಯೋಗಿಗಳ ಸಂಘ (ಎಐಐಇಎ)ದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಿಶ್ರಾ ಕೂಡ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.