ಸಿ.ಜೆ.ರಾಯ್
ತಿರುವನಂತಪುರ: ರಿಯಲ್ ಎಸ್ಟೇಟ್ ಕಂಪನಿಯಾದ ‘ಕಾನ್ಫಿಡೆಂಟ್ ಗ್ರೂಪ್’ ಮುಖ್ಯಸ್ಥ ಸಿ.ಜೆ.ರಾಯ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಕೇರಳದ ಆಡಳಿತಾರೂಢ ಸಿಪಿಎಂ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಯುಡಿಎಫ್ ಶನಿವಾರ ಒತ್ತಾಯಿಸಿವೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ರಾಜ್ಯಸಭಾ ಸದಸ್ಯ ಎ.ಎ.ರಹೀಮ್ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ರಾಯ್ ಅವರ ಸಾವಿನ ಹಿಂದಿನ ಕಾರಣಗಳ ಪತ್ತೆಗೆ ತನಿಖೆ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದನ್, ‘ಆದಾಯ ತೆರಿಗೆ ಇಲಾಖೆ (ಐ.ಟಿ) ಸೇರಿದಂತೆ ಕೇಂದ್ರದ ಸಂಸ್ಥೆಗಳ ಅಧಿಕಾರಿಗಳು ಶೋಧಕಾರ್ಯ ನಡೆಸುವಾಗ ಮಾನವೀಯ ರೀತಿಯಲ್ಲಿ ಏಕೆ ವರ್ತಿಸುತ್ತಿಲ್ಲ’ ಎಂದು ಪ್ರಶ್ನಿಸಿದರು. ರಾಯ್ ಸಾವಿನ ಬಳಿಕವೂ ಅಧಿಕಾರಿಗಳು ಅವರ ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಿದರು ಎಂದು ಅವರು ಆರೋಪಿಸಿದರು.
‘ಉದ್ಯಮಿಯ ಸಾವಿನ ಹಿಂದೆ ‘ನಿಗೂಢತೆ’ ಇದ್ದು, ಆ ಬಗ್ಗೆ ತನಿಖೆ ನಡೆಯಬೇಕು. ಐ.ಟಿ ಅಧಿಕಾರಿಗಳ ಕೈಯಲ್ಲಿ ಅವರು ಯಾವ ರೀತಿಯ ಕಿರುಕುಳ ಎದುರಿಸಿದರು ಎಂಬುದು ಸ್ಪಷ್ಟವಾಗಿಲ್ಲ’ ಎಂದು ವಿ.ಡಿ. ಸತೀಶನ್ ಹೇಳಿದ್ದಾರೆ.
ಉದ್ಯಮಿಯ ಸಾವಿಗೆ ಮಲಯಾಳ ನಟ ಮೋಹನ್‌ಲಾಲ್ ಆಘಾತ ವ್ಯಕ್ತಪಡಿಸಿದ್ದು, ‘ನನ್ನ ಆತ್ಮೀಯ ಗೆಳೆಯ ರಾಯ್ ಅವರ ಸಾವು ತೀವ್ರ ದುಃಖ ಉಂಟುಮಾಡಿದೆ. ಈ ಸಮಯದಲ್ಲಿ ನನ್ನ ಹೃದಯವು ಅವರ ಕುಟುಂಬಕ್ಕೆ ಮಿಡಿಯುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.