ADVERTISEMENT

₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಸಿಬಿಐ ಅಧಿಕಾರಿಗಳಿಂದ ಕಾರ್ಯಾಚರಣೆ

ಪಿಟಿಐ
Published 9 ಜನವರಿ 2026, 22:30 IST
Last Updated 9 ಜನವರಿ 2026, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರಿನ ಕೇಂದ್ರೀಯ ವಿದ್ಯುತ್‌ ಸಂಶೋಧನಾ ಸಂಸ್ಥೆಯ (ಸಿಪಿಆರ್‌ಐ) ಜಂಟಿ ನಿರ್ದೇಶಕ ರಾಜಾರಾಮ್‌ ಮೋಹನ್‌ ರಾವ್‌ ಚೆನ್ನು ಅವರನ್ನು ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ)ಯ ಅಧಿಕಾರಿಗಳು ₹9.5 ಲಕ್ಷ ಲಂಚ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಬಂಧಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಅವರ ಮನೆಯಲ್ಲಿ ಶೋಧ ನಡೆಸಿದ ಸಂದರ್ಭದಲ್ಲಿ ಸುಮಾರು ₹3.59 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಅಮೆರಿಕದ ಡಾಲರ್‌, ಹಾಂಗ್‌ಕಾಂಗ್‌ ಡಾಲರ್‌, ಸಿಂಗಪುರ ಡಾಲರ್‌, ಇಂಡೊನೇಷ್ಯಾದ ರೂಪಿಯ್ಯ, ಮಲೇಷ್ಯಾದ ರಿಂಗಿಟ್, ಯುರೋ, ಯುವಾನ್‌ ಹಾಗೂ ಸ್ವೀಡಿಷ್‌ ಕ್ರೊನಾ ಹಾಗೂ ₹4 ಲಕ್ಷ ಮೌಲ್ಯದ ಸಂಯುಕ್ತ ಅರಬ್‌ ಒಕ್ಕೂಟದ ಧಿರಂ ಕರೆನ್ಸಿ ಸೇರಿದ್ದವು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

‘ಸುಧೀರ್‌ ಗ್ರೂಪ್‌ ಆಫ್‌ ಕಂಪನೀಸ್‌’ ಉತ್ಪಾದಿಸಿದ ವಿದ್ಯುನ್ಮಾನ ಪರಿಕರಗಳಿಗೆ ಸಂಬಂಧಿಸಿ ಅನುಕೂಲಕರವಾದ ಪರೀಕ್ಷಾ ವರದಿಗಳನ್ನು ನೀಡಲು ಚೆನ್ನು ಅವರು ಲಂಚ ಪಡೆದಿದ್ದಾರೆ ಎಂದು ಆರೋ‍ಪಿಸಲಾಗಿದೆ. ಈ ಪ್ರಕರಣದಲ್ಲಿ ಕಂಪನಿಯ ನಿರ್ದೇಶಕ ಅತುಲ್‌ ಖನ್ನಾ ಅವರನ್ನೂ ಬಂಧಿಸಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಎಫ್‌ಐಆರ್‌ ದಾಖಲಿಸಿಕೊಂಡ ಸಿಬಿಐನ ಅಧಿಕಾರಿಗಳು ಶುಕ್ರವಾರ ₹9.5 ಲಕ್ಷ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಸಿಪಿಆರ್‌ಐನ ನಿರ್ದೇಶಕ ಹಾಗೂ ಖಾಸಗಿ ಕಂಪನಿಯ ನಿರ್ದೇಶಕರನ್ನು ಬಂಧಿಸಿದ್ದಾರೆ’ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಚೆನ್ನು ಮನೆಯ ಶೋಧದ ವೇಳೆ ಮನೆಯಿಂದ ₹3.76 ಕೋಟಿ ನಗದನ್ನು (ವಿದೇಶಿ ಕರೆನ್ಸಿ) ಇಲ್ಲಿಯವರೆಗೆ ವಶಕ್ಕೆ ಪಡೆಯಲಾಗಿದ್ದು, ಶೋಧ ಮುಂದುವರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

₹9.5 ಲಕ್ಷ ಲಂಚ ಪ್ರಡೆಯುತ್ತಿದ್ದ ವೇಳೆ ಬಂಧನ ವಿದೇಶಿ ಕರೆನ್ಸಿ ಸೇರಿದಂತೆ  ₹3.76 ಕೋಟಿ ನಗದು ವಶ ಖಾಸಗಿ ಕಂಪನಿಯ ನಿರ್ದೇಶಕನ ಬಂಧನ; ಶೋಧ ಮುಂದುವರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.