ADVERTISEMENT

ಮಹಾರಾಷ್ಟ್ರದಲ್ಲಿ ಬಿಜೆಪಿಯವರಿಂದ ರೆಮ್‌ಡಿಸಿವಿರ್ ದಾಸ್ತಾನು: ಪ್ರಿಯಾಂಕಾ ಆಕ್ಷೇಪ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ವಾಗ್ದಾಳಿ

ಪಿಟಿಐ
Published 19 ಏಪ್ರಿಲ್ 2021, 8:40 IST
Last Updated 19 ಏಪ್ರಿಲ್ 2021, 8:40 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ: ‘ಕೊರೊನಾ ಸೋಂಕಿತರು ಔಷಧವಿಲ್ಲದೇ ಪರದಾಡುತ್ತಿದ್ದರೆ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಚಿಕಿತ್ಸೆಗೆ ಬೇಕಾದ ರೆಮ್‌ಡಿಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

‘ಜನರು ಔಷಧ ಕೊರತೆಯಿಂದ ಪರದಾಡುತ್ತಿರುವಾಗ, ಬಿಜೆಪಿಯವರು ಔಷಧಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮಾನವೀಯತೆ ಮೇಲೆ ನಡೆಸುವ ಅಪರಾಧವಾಗುತ್ತದೆ’ ಎಂದು ಹಿಂದಿಯಲ್ಲಿ ಟ್ವೀಟ್‌ಮಾಡಿದ್ದಾರೆ.

ರೆಮ್‌ಡಿಸಿವಿರ್ ಔಷಧಿಯ ಸಾವಿರಾರು ಶೀಶೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಕ್ಕೆ ಸಂಧಿಸಿದಂತೆ ಫಾರ್ಮಾ ಕಂಪನಿಯ ನಿರ್ದೇಶಕರೊಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವ ವೇಳೆ ದೇವೇಂದ್ರ ಫಡಣವೀಸ್ ಮತ್ತಿತರ ಬಿಜೆಪಿ ನಾಯಕರು ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವನ್ನು ಪ್ರಿಯಾಂಕಾ ಗಾಂಧಿ ತಮ್ಮ ಟ್ವಿಟರ್‌ ಪೋಸ್ಟ್‌ಗೆ ಟ್ಯಾಗ್ ಮಾಡಿದ್ದಾರೆ.

‘ದೇಶದ ಮೂಲೆ ಮೂಲೆಗಳಿಂದ ಏಕಕಾಲಕ್ಕೆ ಜನರು ರೆಮ್‌ಡಿಸಿವಿರ್ ಔಷಧಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಕೆಲವರು ತಮ್ಮ ಜೀವ ಉಳಿಸಿಕೊಳ್ಳಲು ರೆಡಿಸಿವಿರ್ ಔಷಧ ಖರೀದಿಗೆ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜ‌ವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ನಾಯಕರು, ರೆಮ್‌ಡಿಸಿವಿರ್ ಔಷಧಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವುದು ಮಾನವೀಯತೆ ಮೇಲೆ ನಡೆಸುತ್ತಿರುವ ಅಪರಾಧವಾಗಿದೆ‘ ಎಂದು ಪ್ರಿಯಾಂಕಾ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.