ADVERTISEMENT

ಭಯೋತ್ಪಾದಕರಿಗೆ ಹಣಕಾಸಿನ ನೆರವು ಆರೋಪ: ಪೂಂಚ್‌ ಜಿಲ್ಲೆಯ ವಿವಿಧೆಡೆ ಎನ್‌ಐಎ ದಾಳಿ

ಎಲ್‌ಒಸಿ ವ್ಯಾಪಾರದ ಮೂಲಕ ಭಯೋತ್ಪಾದಕರಿಗೆ ಹಣಕಾಸಿನ ನೆರವು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 14:10 IST
Last Updated 3 ಅಕ್ಟೋಬರ್ 2021, 14:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ವ್ಯಾಪಾರ ಮಾಡಿ ಅದರಿಂದ ಬಂದ ಹಣವನ್ನು ಭಯೋತ್ಪಾದನಾ ಸಂಘಟನೆಗಳಿಗೆ ದೇಣಿಗೆ ನೀಡಲಾಗುತ್ತಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಭಾನುವಾರ ಜಮ್ಮು–ಕಾಶ್ಮೀರದ ಪೂಂಚ್ ಜಿಲ್ಲೆಯ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದೆ.

‘ಪೊಲೀಸರು, ಸಿಆರ್‌ಪಿಎಫ್ ಸಿಬ್ಬಂದಿ ಜತೆಗೂಡಿ ಎನ್‌ಐಎನ ಅಧಿಕಾರಿಗಳು ಪೂಂಚ್‌ನ ಶಂಕಿತ ಎಲ್ಒಸಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಸ್ತುತ ಪ್ರಕರಣದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಕ್ಯಾಲಿಫೋರ್ನಿಯಾ ಬಾದಾಮಿ (ಬಾದಾಮ್‌–ಗಿರಿ) ಮತ್ತು ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳುವಾಗ ಭಾರಿ ಮೊತ್ತದ ಹಣವನ್ನು ವರ್ಗಾಯಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶ ಹಾಗೂ ಪೂಂಚ್ ಜಿಲ್ಲೆಯ ಚಕ್ಕನ್ ದ ಭಾಗ್ ಪ್ರದೇಶದಲ್ಲಿರುವ ಎಲ್‌ಒಸಿ ಟ್ರೇಡ್ ಫೆಸಿಲಿಟೇಷನ್ ಸೆಂಟರ್ (ಟಿಎಫ್‌ಸಿ) ಮೂಲಕ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳುವಾಗ ಹಣ ವರ್ಗಾಯಿಸಲಾಗಿದೆ’ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ADVERTISEMENT

‘ಹೀಗೆ ಸಾಗಿಸಲಾಗುತ್ತಿದ್ದ ಹಣವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕವಾದಿಗಳು ಮತ್ತು ಭಯೋತ್ಪಾದನಾ ಸಂಘಟನೆಗಳ ಬಳಕೆಗಾಗಿ ಒದಗಿಸಲಾಗುತ್ತಿತ್ತು. ಕೆಲವು ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಆಮದು ಮಾಡಿಕೊಂಡು ಭಯೋತ್ಪಾದನಾ ಸಂಘಟನೆಗಳಿಗೆ ನೆರವು ನೀಡುತ್ತಿದ್ದರು. ಕೆಲ ವ್ಯಾಪಾರಿಗಳು ಈ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಶಂಕೆ ಇದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2008ರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ನಡುವಣ ಬಾಂಧವ್ಯ ವೃದ್ಧಿಗಾಗಿ ಎಲ್ಒಸಿ ವ್ಯಾಪಾರ ಆರಂಭಿಸಲಾಗಿತ್ತು. ಪರಸ್ಪರ ವಿನಿಮಯ ವ್ಯವಸ್ಥೆಯನ್ನು ಆಧರಿಸಿದ್ದ ಈ ವ್ಯಾಪಾರದಲ್ಲಿ ಮೂರನೇ ವ್ಯಕ್ತಿಯ ಸರಕುಗಳಿಗೆ ಅನುಮತಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.