ADVERTISEMENT

ಯಶಸ್ವಿಯಾಯಿತು ವಿಶ್ವದ ’ದುಬಾರಿ’ ಔಷಧ ಖರೀದಿಯ ಕ್ರೌಡ್‌ ಫಂಡಿಂಗ್

ಪಿಟಿಐ
Published 12 ಜೂನ್ 2021, 11:16 IST
Last Updated 12 ಜೂನ್ 2021, 11:16 IST
ಜೆನೆಟಿಕ್‌ ಥೆರಪಿ (ಸಾಂದರ್ಭಿಕ ಚಿತ್ರ)
ಜೆನೆಟಿಕ್‌ ಥೆರಪಿ (ಸಾಂದರ್ಭಿಕ ಚಿತ್ರ)   

ಹೈದರಾಬಾದ್‌: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನಿಗಾಗಿ ವಿಶ್ವದಲ್ಲಿಯೇ ‘ಅತಿ ದುಬಾರಿ’ಯಾಗಿದ್ದ ಔಷಧವನ್ನು ಖರೀದಿಸಲು ಕ್ರೌಡ್‌ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣ ನೆರವಾಗಿದೆ.

ಮೂರು ವರ್ಷದ ಬಾಲಕನ ಮರುಜನ್ಮ ನೀಡಬಹುದು ಎನ್ನಲಾಗಿದ್ದ ಅನುವಂಶಿಕ ದಾತು (ಜೀನ್‌ ಥೆರಪಿ) ಚಿಕಿತ್ಸೆಗಾಗಿ ಔಷಧವನ್ನು ಖರೀದಿಸಲು ಸುಮಾರು 65 ಸಾವಿರ ಜನರು ಉದಾರವಾಗಿ ನೆರವಾಗಿದ್ದಾರೆ.

₹ 16 ಕೋಟಿ ಮೂಲ ಬೆಲೆಯಿದ್ದ ‘ಜೋಲ್‌ಜೆನ್‌ಸ್ಮಾ’ ಹೆಸರಿನ ಈ ಔಷಧವನ್ನು ಅಮೆರಿಕದಿಂದ ತರಿಸಿಕೊಂಡಿದ್ದು, ಬುಧವಾರ ಬಾಲಕ ಅಯನಾಶ್‌ ಗುಪ್ತಾಗೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನೀಡಲಾಗಿದೆ.

ADVERTISEMENT

ರೋಗದಿಂದಾಗಿ ಬಾಲಕನ ದೇಹದ ಮಾಂಸಖಂಡಗಳು ದುರ್ಬಲವಾಗಿದ್ದವು. ಕೈ–ಕಾಲುಗಳ ಚಲನೆ ಇರಲಿಲ್ಲ. ಕುಳಿತುಕೊಳ್ಳುವುದು, ಸ್ವತಃ ಊಟ ಮಾಡುವುದೂ ಸಾಧ್ಯವಿರಲಿಲ್ಲ ಎನ್ನುತ್ತಾರೆ ಬಾಲಕನ ತಂದೆ ಯೋಗೇಶ್ ಗುಪ್ತಾ.

ಇದು ಗಂಭೀರ ಕಾಯಿಲೆ. ಬಾಲಕ ಇನ್ನು 3–4 ವರ್ಷ ಬದುಕಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡುವುದು ಅಗತ್ಯ ಎಂದು ವೈದ್ಯರು ಹೇಳಿದ್ದರು. ಆದರೆ, ಒಂದು ಡೋಸ್‌ ಔಷಧಿಗೆ ₹ 16 ಕೋಟಿ ಹೊಂದಿಸುವುದೇ ಸಮಸ್ಯೆಯಾಗಿತ್ತು.

ಕುಟುಂಬದ ಆಪ್ತರಿಗೆ ಈಗ ಹೊಳೆದುದೇ ಕ್ರೌಡ್‌ ಫಂಡಿಂಗ್ ಕಲ್ಪನೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ, ಅನಿಲ್ ಕಪೂರ್, ಅಜಯ್‌ ದೇವಗನ್‌ ಒಳಗೊಂಡು ಸುಮಾರು 65 ಸಾವಿರ ಜನರು ನೆರವಾದರು. ಜೊತೆಗೆ, ಕೇಂದ್ರ ಸರ್ಕಾರ ಆಮದು ಸುಂಕದ ಮೊತ್ತ ₹ 6 ಕೋಟಿಗೆ ವಿನಾಯಿತಿ ನೀಡಿತು. ಒಟ್ಟು ಪರಿಣಾಮ, ಬಾಲಕನಿಗೆ ಔಷಧ ನೀಡಿದ್ದು, ಆರೋಗ್ಯದಲ್ಲಿ ಈಗ ಗಮನಾರ್ಹ ಚೇತರಿಕೆ ಕಾಣಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.