ADVERTISEMENT

ಸೌದಿಯ ತೈಲಕ್ಕೆ ಬೆಂಕಿ; ಬೆಲೆ ಏರಿಕೆಯ ಬರೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:21 IST
Last Updated 16 ಸೆಪ್ಟೆಂಬರ್ 2019, 20:21 IST
ಡ್ರೋನ್ ದಾಳಿಗೆ ಒಳಗಾದ ಸೌದಿಯ ಅಬ್‌ಕೈಕ್ ತೈ ಸಂಸ್ಕರಣ ಘಟಕದ ಉಪಗ್ರಹ ಚಿತ್ರ
ಡ್ರೋನ್ ದಾಳಿಗೆ ಒಳಗಾದ ಸೌದಿಯ ಅಬ್‌ಕೈಕ್ ತೈ ಸಂಸ್ಕರಣ ಘಟಕದ ಉಪಗ್ರಹ ಚಿತ್ರ   

ಜಗತ್ತಿನ ಅತಿದೊಡ್ಡ ತೈಲ ಸರಬರಾಜು ದೇಶ ಸೌದಿ ಅರೇಬಿಯಾದ ಎರಡು ತೈಲ ಘಟಕಗಳು ಶನಿವಾರ ಡ್ರೋನ್ ದಾಳಿಗೆ ತುತ್ತಾಗಿದ್ದು, ವಿಶ್ವದಾದ್ಯಂತ ಆತಂಕ ಸೃಷ್ಟಿಯಾಗಿದೆ. ಕಚ್ಚಾ ತೈಲೋತ್ಪಾದನೆಯನ್ನು ಸರಿದಾರಿಗೆ ತರಲು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದುಸೌದಿ ಸರ್ಕಾರ ಹೇಳಿದೆ. ಆದರೆ ಮತ್ತೆ ದಾಳಿ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ದಾಳಿಗೆ ಇರಾನ್ ಕಾರಣ ಎಂದು ಅಮೆರಿಕ ಆರೋಪಿಸಿದೆ. ಕಚ್ಚಾತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯವಾಗಿದ್ದು, ಪ್ರತಿ ಬ್ಯಾರಲ್‌ಗೆ 100 ಅಮೆರಿಕನ್ ಡಾಲರ್‌ಗೆ ತಲುಪುವ ಭೀತಿ ಎದುರಾಗಿದೆ.

**

ಸೌದಿ ಮತ್ತು ತೈಲೋತ್ಪಾದನೆ:

ADVERTISEMENT

*ಸರ್ಕಾರಿ ಸ್ವಾಮ್ಯದ ಅರಾಮ್ಕೊ ಸಂಸ್ಥೆಯ ಅಬ್‌ಕೈಕ್ ಸಂಸ್ಕರಣಾ ಘಟಕ ಮತ್ತು ಖುರೈಸ್ ತೈಲ ಘಟಕಗಳಿಗೆ ಹಾನಿ

*ಡ್ರೋನ್ ದಾಳಿಯಿಂದ ಪ್ರತಿನಿತ್ಯದ 57 ಲಕ್ಷ ಬ್ಯಾರೆಲ್ ತೈಲೋತ್ಪಾದನೆಗೆ ಹೊಡೆತ

*ದಾಳಿಯ ಬಳಿಕ ಶೇ 40ರಷ್ಟು ತೈಲೋತ್ಪಾದನೆ ಮಾತ್ರ ಸಾಧ್ಯವಾಗುತ್ತಿದೆ–ಉದ್ದಿಮೆಯ ಮೂಲಗಳ ಮಾಹಿತಿ (ಅಂದರೆ ದಿನಕ್ಕೆ 23 ಲಕ್ಷ ಬ್ಯಾರೆಲ್)

*ಹಾನಿಗೊಳಗಾಗಿರುವ 2 ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಒಂದು ವಾರ ಬೇಕು– ವಾಲ್‌ಸ್ಟ್ರೀಟ್ ಜರ್ನಲ್ ವರದಿ

*ಶೀಘ್ರವೇ ವಸ್ತುಸ್ಥಿತಿ ಮಾಹಿತಿ ನೀಡುವುದಾಗಿ ಅರಾಮ್ಕೊ ಅಭಯ. ಸರ್ಕಾರದ ಹೇಳಿಕೆ ನಿರೀಕ್ಷೆಯಲ್ಲಿಭಯಗ್ರಸ್ಥ ತೈಲ ಮಾರುಕಟ್ಟೆ

**

ಶೇ 20 – ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಏರಿಕೆ ಪ್ರಮಾಣ

ಶೇ 10 – ಜಾಗತಿಕ ಬೇಡಿಕೆಯ ಪೈಕಿಸೌದಿಪೂರೈಸುವ ತೈಲದ ಪ್ರಮಾಣ

ಶೇ 40 – ಜಾಗತಿಕವಾಗಿ ಒಪೆಕ್ ದೇಶಗಳು ಉತ್ಪಾದಿಸುವ ತೈಲದ ಪ್ರಮಾಣ

**
ಉತ್ಪಾದನಾ ಸಾಮರ್ಥ್ಯ (ದಿನಕ್ಕೆ)

4 ಲಕ್ಷ ಬ್ಯಾರಲ್ – ಅಬ್‌ಕೈಕ್ ಘಟಕದ ಸಂಸ್ಕರಣಾ ಸಾಮರ್ಥ್ಯ

10 ಲಕ್ಷ ಬ್ಯಾರಲ್ –ಖುರೈಸ್ ತೈಲ ಘಟಕದ ಸಾಮರ್ಥ್ಯ

99 ಲಕ್ಷ ಬ್ಯಾರಲ್ – ಸೌದಿಯ ಒಟ್ಟು ತೈಲ ಉತ್ಪಾದನಾ ಸಾಮರ್ಥ್ಯ

70 ಲಕ್ಷ ಬ್ಯಾರಲ್ – ಸೌದಿ ಸರ್ಕಾರ ನಿತ್ಯವೂ ರಫ್ತು ಮಾಡುವ ಕಚ್ಚಾ ತೈಲದ ಪ್ರಮಾಣ

20 ಲಕ್ಷ ಬ್ಯಾರಲ್ – ತುರ್ತುವೇಳೆ ಬಳಸುವ ಸಂಗ್ರಹಾಗಾರದ ಸಾಮರ್ಥ್ಯ

***
ಅರೋಪ–ಪ್ರತ್ಯಾರೋಪ

* ದಾಳಿಯ ಹೊಣೆ ಹೊತ್ತುಕೊಂಡ ಯೆಮನ್‌ನ ಹುತಿ ಬಂಡುಕೋರರು

* ಇದು ಸೌದಿ ತೈಲ ಘಟಕಗಳ ಮೇಲೆ ನಡೆದ ಅತಿದೊಡ್ಡ ದಾಳಿ

* ದಾಳಿ ನಡೆಸಿದವರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ ಸೌದಿ

* ದಾಳಿಗೆ ಇರಾನ್‌ನ ಕಾರಣ ಎಂದ ಅಮೆರಿಕ; ಇರಾನ್ ನಿರಾಕರಣೆ

* ಸೇನಾದಾಳಿ ಸಾಧ್ಯತೆಯನ್ನು ಪ್ರಸ್ತಾಪಿಸಿದ ಡೊನಾಲ್ಡ್ ಟ್ರಂಪ್

**

ಬ್ರೆಂಟ್ ಕಚ್ಚಾತೈಲ ದರ ಏರಿಕೆ:20%

ಸೌದಿ ತೈಲ ಉತ್ಪಾದನಾ ಬಿಕ್ಕಟ್ಟಿನ ಪರಿಣಾಮ ದೊಡ್ಡದಾಗಿದೆ. ಬ್ರೆಂಟ್ ಕಚ್ಚಾತೈಲ ದರ ಶೇ 19.5ರಷ್ಟು ದಾಖಲಾಗಿದ್ದು, ಪ್ರತಿ ಬ್ಯಾರಲ್‌ಗೆ 71.95 ಅಮೆರಿಕನ್ ಡಾಲರ್‌ಗೆ ತಲುಪಿದೆ.

ಟೆಕ್ಸಾಸ್ ಇಂಟರ್‌ಮಿಡಿಯೇಟ್ ದರ ಏರಿಕೆ: 15%

ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೆಟ್ (ಡಬ್ಲ್ಯೂಟಿಐ) ದರವು ಶೇ 15.5ರಷ್ಟು ಏರಿಕೆ ದಾಖಲಿಸಿದ್ದು, ಪ್ರತಿ ಬ್ಯಾರಲ್‌ಗೆ 63.34 ಅಮೆರಿಕನ್ ಡಾಲರ್ ತಲುಪಿದೆ.

**
ಕೇಂದ್ರ ಸರ್ಕಾರದ ಅಭಯ

ಜಗತ್ತಿನ ಮೂರನೇ ಅತಿಹೆಚ್ಚು ತೈಲ ಬಳಕೆದಾರ ದೇಶವಾಗಿರುವ ಭಾರತಕ್ಕೆ ಸೌದಿ ಘಟನೆಯ ಬಿಸಿ ತಟ್ಟಿದೆ. ಆದರೆ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದು ಎಂಬುದಾಗಿ ಸೌದಿ ಸರ್ಕಾರ ಅಭಯ ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಅರಾಮ್ಕೊ ಅಧಿಕಾರಿಗಳು ಭಾರತದ ತೈಲ ಸಂಸ್ಕರಣಾ ಸಿಬ್ಬಂದಿಯ ಜೊತೆ ಸಂಪರ್ಕದಲ್ಲಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಭಾರತಕ್ಕೆ ತೈಲ ಆಮದು

ದೇಶದ ತೈಲ ಬೇಡಿಕೆ ಪೈಕಿ ಶೇ 83ರಷ್ಟು ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ.ಭಾರತಕ್ಕೆ ಹೆಚ್ಚು ತೈಲ ಪೂರೈಕೆಯಾಗುವುದು ಇರಾಕ್‌ನಿಂದ. 2ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಭಾರತಕ್ಕೆ 4 ಕೋಟಿ ಟನ್ ತೈರ ರಫ್ತು ಮಾಡಿದೆ. 2018–19ರ ಆರ್ಥಿಕ ವರ್ಷದಲ್ಲಿ ಭಾರತ ಒಟ್ಟಾರೆ 20.73 ಕೋಟಿ ಟನ್ ತೈಲ ಆಮದು ಮಾಡಿಕೊಂಡಿದೆ.

ತೈಲ ಪೂರೈಕೆ ವ್ಯತ್ಯಯ ತಾತ್ಕಾಲಿಕವೇ?

ಕಚ್ಚಾ ತೈಲೋತ್ಪಾದನೆಯ ಅತಿದೊಡ್ಡ ವ್ಯತ್ಯಯವು ಮುಂದಿನ ದಿನಗಳಲ್ಲಿ ತೈಲ ದರಗಳ ಏರುಗತಿಗೆ ಕಾರಣವಾಗಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ತೈಲ ಪೂರೈಕೆದಾರರು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ.ಪರಿಸ್ಥಿತಿ ಸುಧಾರಿಸಲು 2 ವಾರ ಅಗತ್ಯ. ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳಿಂದ ಇರಾನ್ ಹಾಗೂ ವೆನಿಜುವೆಲಾದಿಂದ ತೈಲ ಪೂರೈಕೆ ಮೊಟಕುಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಿದರೆ, ಈ ಪರಿಸ್ಥಿತಿ ಇನ್ನಷ್ಟು ದಿನ ವಿಸ್ತರಣೆಯಾಗಲಿದೆ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.