ADVERTISEMENT

ಮುಂದಿನ ವಾರ ಸಿಡಬ್ಲ್ಯುಸಿ: ರಾಹುಲ್‌ ಉತ್ತರಾಧಿಕಾರಿ ಆಯ್ಕೆ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:34 IST
Last Updated 1 ಆಗಸ್ಟ್ 2019, 19:34 IST
   

ನವದೆಹಲಿ: ಕಾಂಗ್ರೆಸ್‌ ಪ‍ಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರ ಉತ್ತರಾಧಿಕಾರಿ ಯಾರು ಎಂಬುದು ಮುಂದಿನ ವಾರದ ಬಳಿಕ ಸ್ಪಷ್ಟವಾಗುವ ಸಾಧ್ಯತೆ ಇದೆ. ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ.

ಇದೇ 7ರಂದು ಅಧಿವೇಶನ ಕೊನೆಗೊಳ್ಳಲಿದೆ. ಅದಾದ ಬಳಿಕ ಸಿಡಬ್ಲ್ಯುಸಿ ಸಭೆ ನಡೆಯಲಿದೆ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ರಾಹುಲ್‌ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದಲ್ಲಿ ಅನಿಶ್ಚಿತ ಸ್ಥಿತಿ ಮನೆ ಮಾಡಿದೆ.

ADVERTISEMENT

ಅಧಿವೇಶನದ ಬಳಿಕ ನಡೆಯಲಿರುವ ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಆಗಲಿದೆಯೇ ಎಂಬ ಬಗ್ಗೆ ಸುರ್ಜೇವಾಲಾ ಏನನ್ನೂ ಹೇಳಿಲ್ಲ. ಸಭೆಯ ಕಾರ್ಯಸೂಚಿಯನ್ನೂ ಪಕ್ಷವು ಬಹಿರಂಗಪಡಿಸಿಲ್ಲ.

ರಾಹುಲ್‌ ಉತ್ತರಾಧಿಕಾರಿ ಯಾರಾಗಬೇಕು ಎಂಬ ವಿಚಾರದಲ್ಲಿ ಪಕ್ಷದ ವಲಯಗಳಲ್ಲಿ ಅನೌಪಚಾರಿಕ ಚರ್ಚೆಗಳು ನಡೆಯುತ್ತಿವೆ. ಹಿರಿಯರಿಗೆ ಈ ಸ್ಥಾನ ಕೊಡಬೇಕು ಎಂಬ ನಿಲುವನ್ನು ಕೆಲವು ಗುಂಪುಗಳು ಹೊಂದಿದ್ದರೆ ಯುವಕರಿಗೆ ಆದ್ಯತೆ ನೀಡಬೇಕು ಎಂಬುದು ಮತ್ತೆ ಕೆಲವು ಗುಂಪುಗಳ ವಾದವಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಸುಶೀಲ್‌ ಕುಮಾರ್‌ ಶಿಂಧೆ, ಮುಕುಲ್‌ ವಾಸ್ನಿಕ್‌, ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್‌ ಪೈಲಟ್‌ ಮುಂತಾದವರ ಹೆಸರುಗಳು ಕೇಳಿ ಬರುತ್ತಿವೆ. ರಾಹುಲ್‌ ತಂಗಿ ಪ್ರಿಯಾಂಕಾ ಗಾಂಧಿ ಅವರಿಗೆ ಅಧ್ಯಕ್ಷ ಹುದ್ದೆ ನೀಡಬೇಕು ಎಂದು ಒಂದು ವರ್ಗ ಪ್ರತಿಪಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.