ADVERTISEMENT

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಮುಂದುವರಿಕೆ

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸೋಲಿನ ಆತ್ಮಾವಲೋಕನಕ್ಕೆ ಚಿಂತನ ಶಿಬಿರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 21:01 IST
Last Updated 13 ಮಾರ್ಚ್ 2022, 21:01 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರೇ ಸದ್ಯಕ್ಕೆ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು (ಸಿಡಬ್ಲ್ಯುಸಿ) ನಿರ್ಧರಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನ ಆತ್ಮಾವಲೋಕನಕ್ಕಾಗಿ ಭಾನುವಾರ ಸಭೆ ಕರೆಯಲಾಗಿತ್ತು. ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂಬ ಆಗ್ರಹ ಪಕ್ಷದ ಒಂದು ವರ್ಗದಿಂದ ಕೇಳಿ ಬಂದಿತ್ತು.

ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸೋನಿಯಾ ಅವರು ಸಭೆಯಲ್ಲಿ ಹೇಳಿದರು. ಆದರೆ, ಸಿಡಬ್ಲ್ಯುಸಿ ಅದನ್ನು ಒಪ್ಪಿಕೊಳ್ಳಲಿಲ್ಲ ಎಂದು ಮೂಲಗಳು ಹೇಳಿವೆ. ಸೋನಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸುಮಾರು ನಾಲ್ಕೂವರೆ ತಾಸು ಚರ್ಚೆ ನಡೆಸಿದೆ.

ಸೋನಿಯಾ ಅವರ ನಾಯಕತ್ವದಲ್ಲಿ ಸಿಡಬ್ಲ್ಯುಸಿ ವಿಶ್ವಾಸ ಇರಿಸಿದೆ. ಸಿಡಬ್ಲ್ಯುಸಿಯ ಎಲ್ಲ ಸದಸ್ಯರೂ ಸೋನಿಯಾ ಮುಂದುವರಿಕೆಯನ್ನುಬಯಸಿದರು. ಪಕ್ಷದ ಆಂತರಿಕ ಚುನಾವಣೆ ನಡೆಯುವವರೆಗೆ ಅಧ್ಯಕ್ಷರಾಗಿ ಮುಂದುವರಿಯುವಂತೆ ಸೋನಿಯಾ ಅವರನ್ನು ಸಿಡಬ್ಲ್ಯುಸಿ ಕೋರಿದೆ.

ADVERTISEMENT

ಪಕ್ಷ ಬಲಪಡಿಸುವಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದಕ್ಕಾಗಿ ಚಿಂತನ ಶಿಬಿರವೊಂದನ್ನು ನಡೆಸಲು ಸಭೆಯು ನಿರ್ಧರಿಸಿದೆ.

ರಾಹುಲ್‌ ಗಾಂಧಿ ನಾಯಕತ್ವಕ್ಕೆ ಆಗ್ರಹ:ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ. ರಾಹುಲ್‌ ಅಧ್ಯಕ್ಷರಾಗಲಿ ಎಂದು ಪಕ್ಷದ ಹಲವು ಮುಖಂಡರು ಸಿಡಬ್ಲ್ಯುಸಿ ಸಭೆಗೆ ಮೊದಲೇ ಹೇಳಿಕೆ ಕೊಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್‌ ಅವರಂತೆ ಬೇರೆ ಯಾರೂ ತರಾಟೆಗೆ ತೆಗೆದುಕೊಳ್ಳುತ್ತಿಲ್ಲ. ಮೋದಿ ಅವರು ತಮ್ಮ ಪ್ರತಿ ಭಾಷಣವನ್ನೂ ರಾಹುಲ್‌ ಗಾಂಧಿ ಅವರನ್ನು ಟೀಕಿಸುತ್ತಲೇ ಆರಂಭಿಸುತ್ತಾರೆ. ಅದರ ಅರ್ಥ ಏನು ಎಂಬುದು ಎಲ್ಲರಿಗೂ ಗೊತ್ತು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೂ ರಾಹುಲ್‌ ಅಧ್ಯಕ್ಷತೆಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ಇಡೀ ದೇಶದ ವಿವಿಧ ವರ್ಗಗಳನ್ನು ಜತೆಯಾಗಿ ಇರಿಸುವ ಕೊಂಡಿ ಗಾಂಧಿ ಕುಟುಂಬ. ಚುನಾವಣೆ ಸೋಲು ಅಥವಾ ಗೆಲುವಿನ ಮೇಲೆ ಅದು ಅವಲಂಬಿತ ಅಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ.

ದೆಹಲಿ ಮತ್ತು ಸುತ್ತಮುತ್ತಲಿನ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಕಾಂಗ್ರೆಸ್‌ ಕಚೇರಿಯ ಸಮೀಪ ಸೇರಿದ್ದರು. ರಾಹುಲ್‌ ಅವರು ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂಬುದು ಈ ಕಾರ್ಯಕರ್ತರ ಆಗ್ರಹವಾಗಿತ್ತು.

ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್‌ ಅವರು 2019ರ ಲೋಕಸಭಾ ಚುನಾವಣೆಯ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.