ADVERTISEMENT

ಧೋನಿ, ಶಿಲ್ಪಾ ಶೆಟ್ಟಿ ಸೇರಿ ಹಲವರ ಹೆಸರಲ್ಲಿ ನಕಲಿ ಕ್ರೆಡಿಟ್ ಕಾರ್ಡ್: ಐವರ ಸೆರೆ

ಪಿಟಿಐ
Published 3 ಮಾರ್ಚ್ 2023, 15:52 IST
Last Updated 3 ಮಾರ್ಚ್ 2023, 15:52 IST
   

ನವದೆಹಲಿ: ಬಾಲಿವುಡ್‌ ನಟರು ಮತ್ತು ಭಾರತೀಯ ಕ್ರಿಕೆಟ್‌ ಆಟಗಾರರ ಹೆಸರಿನಲ್ಲಿ ನಕಲಿ ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡು ಕ್ರೆಡಿಟ್‌ ಕಾರ್ಡ್‌ಗಳನ್ನು ಪಡೆದು ಲಕ್ಷಗಟ್ಟಲೆ ವಂಚನೆ ಮಾಡಿರುವ ಸೈಬರ್‌ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುವ ಜಿಎಸ್‌ಟಿ ನಂಬರ್‌ಗಳನ್ನು ಬಳಸಿಕೊಂಡು ಅಭಿಷೇಕ್‌ ಬಚ್ಚನ್‌, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್‌, ಇಮ್ರಾನ್‌ ಹಶ್ಮಿ ಹಾಗೂ ಎಂ.ಎಸ್‌. ಧೋನಿ ಮುಂತಾದ ಖ್ಯಾತನಾಮರ ಹೆಸರಿನಲ್ಲಿ ‘ಒನ್‌ ಕಾರ್ಡ್‌’ ಎಂಬ ಕ್ರೆಡಿಟ್‌ ಕಾರ್ಡ್‌ಗಳನ್ನು ಗುಂಪೊಂದು ಪಡೆದುಕೊಂಡಿದೆ. ಪುಣೆಯಲ್ಲಿರುವ ಹಣಕಾಸು ತಂತ್ರಜ್ಞಾನ ನವೋದ್ಯಮ ಎಫ್‌ಪಿಎಲ್‌ ಟೆಕ್ನಲಾಜಿಕಲ್‌ ಪ್ರೈವೆಟ್‌ ಲಿಮಿಟೆಡ್‌ ‘ಒನ್‌ ಕಾರ್ಡ್‌’ ಎನ್ನುವ ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡುತ್ತಿದೆ.

‘ಪುನೀತ್‌, ಮೊಹಮದ್‌ ಆಸಿಫ್‌, ಸುನಿಲ್‌ ಕುಮಾರ್‌, ಪಂಕಜ್‌ ಮಿಶ್ರಾ ಹಾಗೂ ವಿಶ್ವ ಭಾಸ್ಕರ್‌ ಶರ್ಮಾ ಅವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಎಂಜಿನಿಯರಿಂಗ್‌ ಓದಿದ್ದಾರೆ. ಇಬ್ಬರು ಆಧಾರ್‌ ನೋಂದಣಿ ಕೇಂದ್ರದಲ್ಲಿ ಕೆಲಸ ಮಾಡುವವರು ಹಾಗೂ ಮತ್ತೊಬ್ಬ ಖಾಸಗಿ ಸಂಸ್ಥೆಯ ಉದ್ಯೋಗಿ’ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಈ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ₹10 ಲಕ್ಷದವರೆಗೆ ವಹಿವಾಟು ನಡೆಸುವ (ಕ್ರೆಡಿಟ್‌ ಲಿಮಿಟ್‌) ಅವಕಾಶ ಕೊಡಲಾಗಿತ್ತು. ಈ ಗುಂಪು ಒಂದೇ ವಾರದಲ್ಲಿ ಗರಿಷ್ಠ ಮಿತಿಯಷ್ಟು ಮೊತ್ತವನ್ನು ವೆಚ್ಚ ಮಾಡಿದೆ. ಹಲವು ದಿನಗಳು ಕಳೆದರೂ ಸಂಸ್ಥೆಗೆ ಈ ಹಣ ಮರುಸಂದಾಯವಾಗಲಿಲ್ಲ. ಜೊತೆಗೆ, ಹಲವು ಕ್ರೆಡಿಟ್‌ ಕಾರ್ಡ್‌ಗಳನ್ನು ಒಂದೇ ಡಿವೈಸ್‌ನಲ್ಲಿ ಬಳಸಿರುವ ಬಗ್ಗೆ ಸಂಸ್ಥೆಗೆ ಎಚ್ಚರಿಕೆ ಸಂದೇಶ ಬಂದಿದೆ. ಈ ಆಧಾರದಲ್ಲಿ ಸಂಸ್ಥೆಯು ಪೊಲೀಸರಿಗೆ ದೂರು ನೀಡಿತು’ ಎಂದು ಉಪ ಪೊಲೀಸ್‌ ಆಯುಕ್ತ ಶಾಹದಾರ್‌ ರೋಹಿತ್‌ ಮೀನಾ ಮಾಹಿತಿ ನೀಡಿದರು.

ವಂಚನೆಯ ಅನನ್ಯ ಮಾದರಿ!
‘ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದ ಬಳಿಕ, ಅವರು ವಂಚನೆಗೆ ಅನುಸರಿಸಿದ ಮಾದರಿಯ ಕುರಿತು ಮಾಹಿತಿ ದೊರೆಯಿತು’ ಎನ್ನುತ್ತಾರೆ ಪೊಲೀಸರು.

* ಜಿಎಸ್‌ಟಿಯ ಮೊದಲ ಎರಡು ಸಂಖ್ಯೆ ರಾಜ್ಯಗಳ ಕೋಡ್‌, ಉಳಿದ ಸಂಖ್ಯೆಗಳು ವ್ಯಕ್ತಿಯ ಪ್ಯಾನ್‌ ನಂಬರ್‌ ಆಗಿರುತ್ತದೆ ಎನ್ನುವುದನ್ನು ತಿಳಿದಿದ್ದ ಗುಂಪು, ಗೂಗಲ್‌ ಮೂಲಕ ಈ ಸೆಲೆಬ್ರಿಟಿಗಳ ಜಿಎಸ್‌ಟಿ ಸಂಖ್ಯೆ ಹಾಗೂ ಹುಟ್ಟಿದ ದಿನಾಂಕ ಪಡೆದುಕೊಳ್ಳುತ್ತದೆ. ವಿಡಿಯೊ ಪರಿಶೀಲನೆ ವೇಳೆ ಸಿಕ್ಕಿ ಹಾಕಿಕೊಳ್ಳಬಾರದು ಎಂದು ಪ್ಯಾನ್‌ ಕಾರ್ಡ್‌ಗೆ ತಮ್ಮದೇ ಫೋಟೊವನ್ನು ನೀಡುತ್ತಾರೆ. ಇದೇ ರೀತಿಯಲ್ಲಿ ಆಧಾರ್‌ ಕಾರ್ಡ್‌ಗಳನ್ನೂ ಪಡೆದುಕೊಳ್ಳುತ್ತಾರೆ

* ಕ್ರೆಡಿಟ್‌ ಕಾರ್ಡ್‌ ನೀಡುವ ವೇಳೆ ನಡೆಸುವ ವಿಡಿಯೊ ಪರಿಶೀಲನೆ ವೇಳೆ ಹಣಕಾಸಿನ ಮಾಹಿತಿಯನ್ನು ಕೇಳಲಾಗುತ್ತದೆ. ಈ ಹಂತವನ್ನು ಪಾರು ಮಾಡಲು, ಖ್ಯಾತನಾಮದ ಹಣಕಾಸಿನ ಮಾಹಿತಿಯನ್ನು ಸಿಬಿಲ್‌ನಿಂದ (ಸಾಲಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ವಿವರಗಳನ್ನು ದಾಖಲಿಸುವ ವ್ಯವಸ್ಥೆ) ಪಡೆದುಕೊಳ್ಳುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.