ADVERTISEMENT

ದುರ್ಬಲಗೊಂಡು ಕರಾವಳಿಗೆ ಸಮೀಪಿಸುತ್ತಿದೆ ‘ಅಸನಿ’ ಚಂಡಮಾರುತ

ಪಿಟಿಐ
Published 10 ಮೇ 2022, 8:44 IST
Last Updated 10 ಮೇ 2022, 8:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪ್ರಬಲ ಚಂಡಮಾರುತ ‘ಅಸನಿ’ ಪೂರ್ವ ಕರಾವಳಿಗೆ ಸಮೀಪಿಸುತ್ತಿದೆಯಾದರೂ, ಮಂಗಳವಾರ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಸದ್ಯ ಗಂಟೆಗೆ 105 ಕಿ.ಮೀ ವೇಗದ ಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಸೋಮವಾರ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಚಂಡಮಾರುತವು ಮಂಗಳವಾರ ಗಂಟೆಗೆ 5 ಕಿ.ಮೀ ವೇಗದಲ್ಲಿ ಸಾಗುತ್ತಿದೆ. ಸದ್ಯ ಆಂಧ್ರಪ್ರದೇಶದ ಕಾಕಿನಾಡದಿಂದ ಆಗ್ನೇಯಕ್ಕೆ 300 ಕಿ.ಮೀ ಮತ್ತು ಒಡಿಶಾದ ಗೋಪಾಲ್‌ಪುರದಿಂದ ಆಗ್ನೇಯಕ್ಕೆ 510 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ.

ಕರಾವಳಿಯತ್ತ ಬರುತ್ತಿರುವ ಚಂಡಮಾರತುವು ಮಂಗಳವಾರ ರಾತ್ರಿ ತಿರುವು ಪಡೆದು, ಉತ್ತರ-ಈಶಾನ್ಯ ದಿಕ್ಕಿನಲ್ಲಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ADVERTISEMENT

‘ಪ್ರಬಲ ಚಂಡಮಾರುತವು ಈಗಾಗಲೇ ತೀವ್ರತೆ ಕಳೆದುಕೊಳ್ಳಲು ಪ್ರಾರಂಭಿಸಿದೆ. ಮುಂದಿನ 24 ಗಂಟೆಗಳಲ್ಲಿ ಇದು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಅದು ಕರಾವಳಿಯನ್ನು ಸಮೀಪಿಸುತ್ತಿದ್ದು ನಂತರ ತಿರುವು ಪಡೆದು ಚಲಿಸಲಿದೆ‘ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಚ್ ಆರ್ ಬಿಸ್ವಾಸ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ವೇಳೆಗೆ ಗಾಳಿಯ ವೇಗ ಗಂಟೆಗೆ 80-90 ಕಿ.ಮೀ ಮತ್ತು ಬುಧವಾರ ಸಂಜೆ 60-70 ಕಿ.ಮೀ.ಗೆ ಇಳಿಯಲಿದೆ ಎಂದು ಅವರು ತಿಳಿಸಿದರು.

ಒಡಿಶಾ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರದವರೆಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಮಂಗಳವಾರ ಬೆಳಗ್ಗೆ ಗಂಜಾಂ, ಪುರಿ ಮತ್ತು ಖುರ್ದಾದಲ್ಲಿ ಮಳೆ ದಾಖಲಾಗಿದೆ.

ಮೇ 10-12 ರವರೆಗೆ ಒಡಿಶಾದ ಕರಾವಳಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದೂ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನಾಲ್ಕು ಕರಾವಳಿ ಜಿಲ್ಲೆಗಳ 15 ಬ್ಲಾಕ್‌ಗಳ ಜನರನ್ನು ಸ್ಥಳಾಂತರಿಸಲು ತಿಳಿಸಲಾಗಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪಿ ಕೆ ಜೆನಾ ತಿಳಿಸಿದ್ದಾರೆ.

ಗಂಜಾಂ ಜಿಲ್ಲಾಡಳಿತವು ಗೋಪಾಲ್‌ಪುರ ಸೇರಿದಂತೆ ಎಲ್ಲಾ ಕಡಲ ತೀರಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.