ADVERTISEMENT

‘ಫೋನಿ’: ಒಡಿಶಾದಲ್ಲಿ 8 ಲಕ್ಷ ಮಂದಿ ಸ್ಥಳಾಂತರ

ಬೃಹತ್‌ ಪ್ರಮಾಣದ ಕಾರ್ಯಾಚರಣೆ: ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 2 ಮೇ 2019, 20:31 IST
Last Updated 2 ಮೇ 2019, 20:31 IST
ಚಂಡಮಾರುತದ ಉಪಗ್ರಹ ಚಿತ್ರ  -ಎಎಫ್‌ಪಿ
ಚಂಡಮಾರುತದ ಉಪಗ್ರಹ ಚಿತ್ರ -ಎಎಫ್‌ಪಿ   

ಭುವನೇಶ್ವರ/ನವದೆಹಲಿ/ ಅಮರಾವತಿ (ಪಿಟಿಐ/ರಾಯಿಟರ್ಸ್‌/ಎಪಿ): ಒಡಿಶಾದ ಕರಾವಳಿ ಪ್ರದೇಶದಲ್ಲಿನ ಸುಮಾರು 8 ಲಕ್ಷ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವ ಬೃಹತ್‌ ಕಾರ್ಯ ಆರಂಭವಾಗಿದೆ.

‘ಫೋನಿ’ ಚಂಡಮಾರುತ ತೀವ್ರಗೊಂಡಿರುವುದರಿಂದ ಸರ್ಕಾರ ಈ ಕ್ರಮಕೈಗೊಂಡಿದೆ. 15 ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಇಂತಹ ಬೃಹತ್‌ ಕಾರ್ಯ ದೇಶದಲ್ಲೇ ಅತಿ ದೊಡ್ಡದು ಎಂದು ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಠಿ ತಿಳಿಸಿದ್ದಾರೆ.

ADVERTISEMENT

‘ಸುಮಾರು ಒಂದು ಸಾವಿರ ಗರ್ಭಿಣಿಯರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆದ್ಯತೆ ಮೇರೆಗೆ ಗರ್ಭಿಣಿಯರನ್ನು ಸುರಕ್ಷಿತವಾದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ವಿಶೇಷ ಪರಿಹಾರ ಆಯುಕ್ತ ಸಂಗ್ರಾಮ್‌ ಮೊಹಪಾತ್ರಾ ತಿಳಿಸಿದ್ದಾರೆ.

ಚಂಡಮಾರುತದಿಂದ ಬಾಧಿತವಾಗಿರುವ ಜನರಿಗೆ ಆಹಾರ ಒದಗಿಸಲು ಒಂದು ಲಕ್ಷ ಆಹಾರ ಪೊಟ್ಟಣಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಹೆಲಿಕಾಪ್ಟರ್‌ ಮೂಲಕ ತಲುಪಿಸಲು ಉದ್ದೇಶಿಸಲಾಗಿದೆ.

ಪುರಿ ಸಮೀಪದ ಕರಾವಳಿ ಪ್ರದೇಶವನ್ನು ‘ಫೋನಿ’ ಶುಕ್ರವಾರ ಪ್ರವೇಶಿಸಲಿದ್ದು, 18ರಿಂದ 200 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಜತೆಗೆ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲೂ ಇದರ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾದ ಕರಾವಳಿ ಪ್ರದೇಶ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಲವು ಸ್ಥಳಗಳಲ್ಲಿ 20 ಸೆಂಟಿ ಮೀಟರ್‌ಗೂ ಅಧಿಕ ಮಳೆಯಾಗಬಹುದು ಎಂದು ತಿಳಿಸಿದೆ.

ಶಾಲೆ–ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ.

‘ಫೋನಿ’ ಎದುರಿಸಲು ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತಮಟ್ಟದ ಸಭೆ ನಡೆಸಿದರು.

ನೆರವು ಒದಗಿಸಲು ಏರ್‌ಲೈನ್ಸ್‌ಗಳಿಗೆ ಸೂಚನೆ:ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಎಲ್ಲ ಏರ್‌ಲೈನ್ಸ್‌ಗಳು ನೆರವು ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಸೂಚಿಸಿದ್ದಾರೆ.

ರಕ್ಷಣಾ ಕಾರ್ಯಕ್ಕೆ 4 ಸಾವಿರ ಸಿಬ್ಬಂದಿ
ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗುವ ಒಡಿಶಾ, ಆಂಧ್ರಪ್ರದೇಶ ಮತ್ತು ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಸುಮಾರು ನಾಲ್ಕು ಸಾವಿರ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ ತಂಡಗಳಿಗೆ ಹೆಚ್ಚುವರಿ ದೋಣಿಗಳು, ಉಪಗ್ರಹ ಆಧಾರಿತ ದೂರವಾಣಿ, ವೈದ್ಯಕೀಯ ಉಪಕರಣಗಳು, ಔಷಧಗಳು ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ.

ನೌಕಾಪಡೆ ಏಳು ಯುದ್ಧ ನೌಕೆಗಳನ್ನು ಮತ್ತು ಆರು ವಿಮಾನಗಳು ಹಾಗೂ ಏಳು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.

ಒಡಿಶಾದಲ್ಲೇ ಹೆಚ್ಚು
ಇತರ ರಾಜ್ಯಗಳಿಗೆ ಹೋಲಿಸಿದರೆ ಒಡಿಶಾದಲ್ಲೇ ಅತಿ ಹೆಚ್ಚು ಚಂಡಮಾರುತಗಳ ಸಂಭವಿಸಿವೆ. 1891ರಿಂದ 2000ರವರೆಗೆ 98 ಚಂಡಮಾರುತಗಳು ಈ ರಾಜ್ಯದಲ್ಲಿ ಸಂಭವಿಸಿವೆ.

ನಾಸಾ ನಿಗಾ
ವಾಷಿಂಗ್ಟನ್‌ (ಪಿಟಿಐ): ನಾಸಾ ಉಪಗ್ರಹಗಳಾದ ‘ಅಕ್ವಾ’ ಮತ್ತು ‘ಟೆರ‍್ರಾ’ ಫೋನಿ ಚಂಡಮಾರುತದ ಮೇಲೆ ನಿರಂತರ ನಿಗಾವಹಿಸಿವೆ.

ಚಂಡಮಾರುತದ ವಿವಿಧ ಚಿತ್ರಗಳನ್ನು ಈ ಉಪಗ್ರಗಳು ಒದಗಿಸುತ್ತಿವೆ ಎಂದು ನಾಸಾ ತಿಳಿಸಿದೆ.

***
ಪ್ರತಿಯೊಂದು ಜೀವವು ಅತ್ಯಮೂಲ್ಯ. ಗರ್ಭಿಣಿಯರು, ಮಕ್ಕಳು, ವೃದ್ಧರು ಅಂಗವಿಕಲರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ.
-ನವೀನ್‌ ಪಟ್ನಾಯಿಕ್‌, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.