ADVERTISEMENT

ಆಂಧ್ರಪ್ರದೇಶಕ್ಕೆ ಅಪ್ಪಳಿಸಲಿದೆ ಪೆಥೈ ಚಂಡಮಾರುತ: 9 ಜಿಲ್ಲೆಗಳಿಗೆ ಹೈ ಅಲರ್ಟ್‌

ಕಾಕಿನಾಡದಲ್ಲಿ ಭೂಕುಸಿತ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 4:27 IST
Last Updated 17 ಡಿಸೆಂಬರ್ 2018, 4:27 IST
ಭಾರತೀಯ ಹವಾಮಾನ ಇಲಾಖೆಯ ನಕ್ಷೆ
ಭಾರತೀಯ ಹವಾಮಾನ ಇಲಾಖೆಯ ನಕ್ಷೆ   

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಪೆಥೈ ಚಂಡಮಾರುತ ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆ ಭಾಗಗಳಿಗೆ ಹೈ ಅಲರ್ಟ್ ಘೋಷಿಸಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಈ ಚಂಡಮಾರುತಕ್ಕೆ ಪೆಥೈ ಎಂಬ ಹೆಸರಿಡಲಾಗಿದೆ. ಎರಡು ರಾಜ್ಯಗಳು ಸೇರಿದಂತೆ ವಿವಿಧೆಡೆ ಮಳೆಯ ಆರ್ಭಟ ಶುರುವಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಆಂಧ್ರದ ಕಾಕಿನಾಡ ಕಡೆ ಗಂಟೆಗೆ 70 ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಸೋಮವಾರ ಮಧ್ಯಾಹ್ನದ ವೇಳೆಗೆ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ADVERTISEMENT

ಆಂಧ್ರಪ್ರದೇಶದ ಕರಾವಳಿ ಭಾಗಗಳಾದ ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳ ತಗ್ಗುಪ್ರದೇಶಗಳಿಗೆ ಹಾಗೂ ಪುದುಚೆರಿಯ ಯಾನಂ ಜಿಲ್ಲೆಗೆ ಚಂಡಮಾರುತ ತೀವ್ರವಾಗಿ ಹಾನಿಯುಂಟು ಮಾಡುವ ಸಾಧ್ಯತೆ ಇರುವುದರಿಂದ ಆ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗೆ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿದೆ.

ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೃಷ್ಣ ಜಿಲ್ಲೆಯಲ್ಲಿ ಭಾನುವಾರ ಮಳೆಯಾಗಿದ್ದು, ವಿಪರೀತ ಗಾಳಿ ಬೀಸತೊಡಗಿತ್ತು. ಸಮುದ್ರದ ಮಟ್ಟವೂ ಹೆಚ್ಚಾಗಿತ್ತು. ರಾಜ್ಯಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯವಿರುವುದರಿಂದ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ದೇಶನ ನೀಡಿದ್ದಾರೆ. ಸಮುದ್ರದಲ್ಲಿ ಮೀನು ಹಿಡಿಯಲು ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.