ADVERTISEMENT

ತೌತೆ ಚಂಡಮಾರುತ: ಗುಜರಾತ್‌ನ ಹಲವೆಡೆ ಮಳೆ, ವಿದ್ಯುತ್‌ ಸಂಪ‍ರ್ಕ ಕಡಿತ

1998ರ ನಂತರದ ಭೀಕರ ಚಂಡಮಾರುತ l 2,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ l ಇಂದು ಗುಜರಾತ್‌ನಲ್ಲಿ ಮೋದಿ ಸಮೀಕ್ಷೆ

ಪಿಟಿಐ
Published 18 ಮೇ 2021, 18:21 IST
Last Updated 18 ಮೇ 2021, 18:21 IST
ಅಹಮದಾಬಾದ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ ಪಿಟಿಐ– ಚಿತ್ರ
ಅಹಮದಾಬಾದ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ ಪಿಟಿಐ– ಚಿತ್ರ   

ಅಹಮದಾಬಾದ್: ತೌತೆ ಚಂಡಮಾರುತದಿಂದಾಗಿ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಮಳೆ ಮತ್ತು ಬಿರುಗಾಳಿಯ ತೀವ್ರತೆಗೆ ಸಾವಿರಾರು ಮರಗಳು ನೆಲಕಚ್ಚಿವೆ. ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿರುವ ಕಾರಣ, ಎರಡು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಭೂಕುಸಿತ ಮತ್ತು ಸಮುದ್ರ ಕೊರೆತದಿಂದ ರಾಜ್ಯದ 150ಕ್ಕೂ ಹೆಚ್ಚು ರಸ್ತೆ, ಹೆದ್ದಾರಿಗಳಿಗೆ ಹಾನಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗುಜರಾತ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಭಾವನಗರ್‌ ಜಿಲ್ಲೆಯಲ್ಲಿ ವಿದ್ಯುತ್ ಕಂಬ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಪಲಿತಾನಾದಲ್ಲಿ ಮನೆ ಕುಸಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ಇನ್ನು ರಾಜಕೋಟ್, ವಲ್ಸದ್ , ಅಮ್ರೇಲಿ ಮತ್ತು ಪಟಾನ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ADVERTISEMENT

ಮಳೆಗೆ ಕುಸಿದಿರುವ ಮನೆಗಳನ್ನು ಸರಿಪಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಹಲವೆಡೆ ವಿದ್ಯುತ್ ಪೂರೈಕೆಯನ್ನು ಸರಿಪಡಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಸರಿಪಡಿಸಲು ನಾಲ್ಕೈದು ದಿನಗಳು ಬೇಕಾಗಬಹುದು.ರಾಜ್ಯದ ಹಲವೆಡೆ 16 ಕೋವಿಡ್‌ ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 12 ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ಆರಂಭಿಸಲಾಗಿದೆ. ಉಳಿದ ಆಸ್ಪತ್ರೆಗಳು ಜನರೇಟರ್ ವಿದ್ಯುತ್‌ನಲ್ಲಿಯೇ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯ ವಿಕೋಪ ನಿರ್ವಹಣಾ ಪಡೆ ಹೇಳಿದೆ.

1998ರ ಜೂನ್‌ 9ರಂದು ಅಪ್ಪಳಿಸಿದ್ದ ಚಂಡಮಾರುತಕ್ಕೆ ರಾಜ್ಯದಾದ್ಯಂತ 1,173 ಜನರು ಮೃತಪಟ್ಟಿದ್ದರು. ಆನಂತರ ಅತಿಹೆಚ್ಚು ಸಾವು ಮತ್ತು ಹಾನಿ ಮಾಡಿರುವುದು ತೌತೆ ಚಂಡಮಾರುತ.

16 ಜನರ ರಕ್ಷಣೆ: ಸಮುದ್ರದ ಮಧ್ಯೆ ಚಂಡಮಾರುತಕ್ಕೆ ಸಿಲುಕಿದ್ದ ಮೀನುಗಾರರು ಮತ್ತು ಮತ್ತೊಂದು ದೋಣಿಯೊಂದರ ಸಿಬ್ಬಂದಿಯನ್ನು ವಾಯಪಡೆಯು ರಕ್ಷಿಸಿದೆ.

ಇಲ್ಲಿನ ವೆರಾವಲ್ ಬಂದರಿನಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ದೋಣಿಯೊಂದು ಚಂಡಮಾರುತಕ್ಕೆ ಸಿಲುಕಿ, ಕೊಚ್ಚಿಹೋಗಿತ್ತು. ಅದರಲ್ಲಿದ್ದ 8 ಮೀನುಗಾರರನ್ನು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಸತ್ಪತಿ ಕಡಲ ತೀರದಿಂದ ಕೊಚ್ಚಿ ಹೋಗಿದ್ದ ದೋಣಿಯೊಂದರಲ್ಲಿದ್ದ 8 ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮುಂಬೈನಲ್ಲಿ ದಾಖಲೆ ಮಳೆ: ಕಳೆದ 24 ಗಂಟೆಗಳಲ್ಲಿ ಮುಂಬೈನ ಕೊಲಾಬಾದಲ್ಲಿ 207 ಮಿ.ಮೀ., ಸಾಂತಾಕ್ರೂಜ್‌ನಲ್ಲಿ 230 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಬಂದ್ ಆಗಿದ್ದ ಬಾಂದ್ರಾ–ವರ್ಲಿ ಸಿ–ಲಿಂಕ್ ಅನ್ನು ಮಂಗಳವಾರ ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಮೊನೊರೈಲು ಸಂಪರ್ಕವೂ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪುನರಾರಂಭವಾಯಿತು.

ಮುಂಜಾಗ್ರತೆ ಕ್ರಮವಾಗಿ ರತ್ನಗಿರಿ, ಸಿಂಧುದುರ್ಗ, ರಾಯಗಡ, ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಒಟ್ಟು 13,389 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಹಾನಿಯ ತೀವ್ರತೆ

16,500 – ಹಾನಿಯಾದ ಮನೆಗಳ ಸಂಖ್ಯೆ

40,000 – ನೆಲಕ್ಕುರುಳಿದ ಮರಗಳ ಸಂಖ್ಯೆ

1,081 – ನೆಲಕಚ್ಚಿದ ವಿದ್ಯುತ್ ಕಂಬಗಳು

2,437 – ವಿದ್ಯುತ್ ಪೂರೈಕೆ ಕಡಿತಗೊಂಡ ಗ್ರಾಮಗಳು

159 – ಹಾನಿಯಾಗಿರುವ ರಸ್ತೆ-ಹೆದ್ದಾರಿಗಳು

196 – ಮರ-ವಿದ್ಯುತ್ ಕಂಬ ಬಿದ್ದು ಸಂಚಾರ ಸ್ಥಗಿತವಾಗಿರುವ ರಸ್ತೆ-ಹೆದ್ದಾರಿಗಳು

ಬಾರ್ಜ್‌ನಲ್ಲಿದ್ದ 317 ಜನರ ರಕ್ಷಣೆ

ತೌತೆ ಚಂಡಮಾರುತದ ಹೊಡೆತದಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಎರಡು ಬಾರ್ಜ್‌ಗಳಲ್ಲಿದ್ದ 317 ಜನರನ್ನು ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಗಳು ಮಂಗಳವಾರ ರಕ್ಷಿಸಿವೆ. ಆದರೆ ಇನ್ನೂ 390 ಜನರು ಸಂಕಷ್ಟದಲ್ಲಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಮೂರು ಬಾರ್ಜ್‌ಗಳು ಹಾಗೂ ಒಂದು ತೈಲ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 707 ಜನರು ಸೋಮವಾರ ಸಂಕ
ಷ್ಟಕ್ಕೆ ಸಿಲುಕಿದ್ದರು. ವಸತಿ ಸೌಕರ್ಯವಿದ್ದ ಪಿ–305 ಹೆಸರಿನ ಬಾರ್ಜ್‌ನಲ್ಲಿ 273 ಜನರಿದ್ದರು. ಜಿಎಎಲ್ ಕನ್‌ಸ್ಟ್ರಕ್ಟರ್‌ ಸರಕು ಸಾಗಣೆ ಬಾರ್ಜ್‌ನಲ್ಲಿ 137 ಜನರು ಇದ್ದರು. ವಸತಿ ಸೌಕರ್ಯವಿದ್ದ ಮತ್ತೊಂದು ಬಾರ್ಜ್ ಎಸ್ಎಸ್–3ನಲ್ಲಿ 196 ಜನ ಇದ್ದರು. ಜೊತೆಗೆ ಸಾಗರ್ ಭೂಷಣ್ ತೈಲ ಘಟಕದಲ್ಲಿ 101 ಜನ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ಪಿ–305 ಬಾರ್ಜ್‌ನಿಂದ 180 ಜನರು ಹಾಗೂ ಜಿಎಎಲ್ ಕನ್‌ಸ್ಟ್ರಕ್ಟರ್ ಬಾರ್ಜ್‌ನಿಂದ 137 ಜನರನ್ನು ಈವರೆಗೆ ರಕ್ಷಣೆ ಮಾಡಲಾಗಿದೆ. ಎರಡು ಚೇತಕ್ ಹೆಲಿಕಾಪ್ಟರ್‌ಗಳು ಕಾರ್ಯೋನ್ಮುಖವಾಗಿದ್ದು, ಎಸ್‌ಎಸ್–3 ಮತ್ತು ಸಾಗರ್ ಭೂಷಣ್ ತೈಲ ಘಟಕದಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.

ನೌಕಾಪಡೆಯ ಹಡಗುಗಳಾದ ಐಎನ್‌ಎಸ್ ಬಿಯಾಸ್, ಐಎನ್‌ಎಸ್ ಬೆಟ್ವಾ ಮತ್ತು ಐಎನ್‌ಎಸ್ ತೇಗ್‌ಗಳು ಮುಂಬೈನಿಂದ 35 ನಾಟಿಕಲ್ ಮೈಲು ದೂರದಲ್ಲಿ ಮುಳುಗಿರುವ ಬಾರ್ಜ್ ಪಿ-305ಗಾಗಿ ಹುಡುಕಾಟ ನಡೆಸುತ್ತಿದ್ದು, ಐಎನ್‌ಎಸ್ ಕೊಚ್ಚಿ ಮತ್ತು ಐಎನ್‌ಎಸ್ ಕೋಲ್ಕತ್ತಾ ನೌಕೆಗಳಿಗೆ ನೆರವಾಗುತ್ತಿವೆ. ಪಿ8ಐ ಮತ್ತು ನೌಕಾ ಹೆಲಿಕಾಪ್ಟರ್‌ಗಳು ಈ ಪ್ರದೇಶದಲ್ಲಿ ವೈಮಾನಿಕ ಶೋಧ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.