ADVERTISEMENT

ಸಂಜೆ ವೇಳೆಗೆ ಗುಜರಾತ್‌ ತಲುಪಲಿರುವ ತೌತೆ ಚಂಡಮಾರುತ: 1 ಲಕ್ಷ ಜನರ ಸ್ಥಳಾಂತರ

ಪಿಟಿಐ
Published 17 ಮೇ 2021, 7:19 IST
Last Updated 17 ಮೇ 2021, 7:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ‘ತೌತೆ’ ಚಂಡಮಾರುತವು ಇನ್ನಷ್ಟು ತೀವ್ರಗೊಂಡಿದ್ದು, ಸೋಮವಾರ ಸಂಜೆಯ ಹೊತ್ತಿಗೆ ಗುಜರಾತ್‌ ಕರಾವಳಿಯನ್ನು ‍ಪ್ರವೇಶಿಸಲಿದೆ. ರಾತ್ರಿ 8ರಿಂದ 11ರ ನಡುವೆ ರಾಜ್ಯದ ಕರಾವಳಿಯನ್ನು ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ತಿಳಿಸಿದೆ.

‘ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 17 ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ ವಾಸಿಸುವ 1 ಲಕ್ಷಕ್ಕೂ ಹೆಚ್ಚು ಜನರನ್ನು ಭಾನುವಾರ ತಡರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಸೋಮವಾರ ಬೆಳಿಗ್ಗೆ ಈ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ’ ಎಂದು ಗುಜರಾತ್‌ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

‘ಚಂಡಮಾರುತದಿಂದಾಗಿ ಕಳೆದ 24 ಗಂಟೆಗಳಲ್ಲಿ ಗುಜರಾತ್‌ನ 21 ಜಿಲ್ಲೆಗಳ 84 ತಾಲೂಕುಗಳಲ್ಲಿ ಸ್ವಲ್ಪ ಮಳೆಯಾಗಿದೆ’ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ತಿಳಿಸಿದೆ.

ADVERTISEMENT

‘ತೌತೆ ಚಂಡಮಾರುತವು ಇನ್ನಷ್ಟು ತೀವ್ರಗೊಂಡಿದೆ. ಸೋಮವಾರ ಸಂಜೆ ಗುಜರಾತ್‌ನ ಕರಾವಳಿಯನ್ನು ತಲುಪಲಿದೆ. ಪೋರ್‌ಬಂದರ್‌ ಮತ್ತು ಭಾವನಗರ ಜಿಲ್ಲೆಯ ಮಹುವಾ ನಡುವೆ ‘ತೌತೆ’ ರಾತ್ರಿ ವೇಳೆಗೆ ಹಾದು ಹೋಗಲಿದೆ. ಈ ವೇಳೆ ಅದರ ವೇಗವು 155ರಿಂದ 150 ಕಿ.ಮೀ ಇರಬಹುದು’ ಎಂದು ಐಎಂಡಿ ಹೇಳಿದೆ.

‘ಹಲವು ಪ್ರದೇಶಗಳಲ್ಲಿ ಲಘು ಮತ್ತು ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಸೋಮವಾರ ಮತ್ತು ಮಂಗಳವಾರ ಸೌರಾಷ್ಟ್ರ, ದಿಯು ಮತ್ತು ಗುಜರಾತ್‌ನ ಹಲವೆಡೆ ಭಾರಿ ಮಳೆಯಾಗಲಿದೆ’ ಎಂದು ಐಎಂಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.