ADVERTISEMENT

ಯಸ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಸಾವು,1 ಕೋಟಿ ಜನರಿಗೆ ತೊಂದರೆ: ಮಮತಾ

​ಪ್ರಜಾವಾಣಿ ವಾರ್ತೆ
Published 26 ಮೇ 2021, 11:32 IST
Last Updated 26 ಮೇ 2021, 11:32 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ಕೋಲ್ಕತ್ತ: ಯಸ್ ಚಂಡಮಾರುತದ ಹೊಡೆತಕ್ಕೆ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 'ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟರೆ, ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ಮನೆ ಕುಸಿದು ಇನ್ನೊಬ್ಬರು ಸಾವನ್ನಪ್ಪಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಯಸ್ ಚಂಡಮಾರುತದಿಂದ 1 ಕೋಟಿ ಜನರಿಗೆ ತೊಂದರೆಯಾಗಿದ್ದು, 3 ಲಕ್ಷ ಮನೆಗಳಿಗೆ ಹಾನಿಯಾಗಿದೆ. 20 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದ್ದು, ಅವರೂ ಸಹ ಸಂತ್ರಸ್ತರ ಪಟ್ಟಿಗೆ ಬರಲಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬುಧವಾರ ಒಡಿಶಾದ ಧರ್ಮ ಬಂದರಿನಲ್ಲಿ ಧರೆಗಪ್ಪಳಿಸಿದ ಯಸ್ ಚಂಡಮಾರುತದ ವೇಗ ಗಂಟೆಗೆ 130–140ಕಿ.ಮೀನಷ್ಟಿತ್ತು. ಬಳಿಕ 150 ಕಿ.ಮೀಗೆ ಮಾರುತದ ವೇಗ ಹೆಚ್ಚಾಯಿತು ಎಂದು ರಾಡಾರ್ ಮಾಹಿತಿಯಿಂದ ತಿಳಿದುಬಂದಿದೆ.

ADVERTISEMENT

‘ಸದ್ಯದಲ್ಲೇ ನಾನು ಚಂಡಮಾರುತದಿಂದಾಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಪೂರ್ವ ಮೇದಿನಿಪುರ, ದಕ್ಷಿಣ 24 ಪರಗಣ, ಉತ್ತರ 24 ಪರಗಣ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತೇನೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈಗಾಗಲೇ, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ನೀಡಿದ ವರದಿಗಳಿಂದ ಉಂಟಾಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಸಿಎಂ ಹೇಳಿದರು.

‘ಹಾನಿ ಕುರಿತಾದ ಅಂತಿಮ ಅಂದಾಜು ಪಡೆಯಲು ನಾವು ಕ್ಷೇತ್ರ ಸಮೀಕ್ಷೆಗಳನ್ನು ನಡೆಸುತ್ತೇವೆ. ಸ್ಪಷ್ಟವಾದ ಚಿತ್ರಣ ಪಡೆಯಲು ನಮಗೆ ಕನಿಷ್ಠ 72 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.