ADVERTISEMENT

ಅಪಘಾತದಲ್ಲಿ ಸೈರಸ್‌ ಮಿಸ್ತ್ರಿ ಸಾವು: ವೈದ್ಯರ ಮಾಹಿತಿಯಲ್ಲಿ ಏನಿದೆ?

ಪಿಟಿಐ
Published 6 ಸೆಪ್ಟೆಂಬರ್ 2022, 12:19 IST
Last Updated 6 ಸೆಪ್ಟೆಂಬರ್ 2022, 12:19 IST
ಸೈರಸ್‌ ಮಿಸ್ತ್ರಿ
ಸೈರಸ್‌ ಮಿಸ್ತ್ರಿ    

ಮುಂಬೈ: ಕಾರು ಅಪಘಾತದಲ್ಲಿ ಮೃತಪಟ್ಟ, ಟಾಟಾ ಸನ್ಸ್‌ನ ಮಾಜಿ ಚೇರಮನ್ ಸೈರಸ್‌ ಮಿಸ್ತ್ರಿ ಹಾಗೂ ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ ಅವರಿಗೆ ಹಲವು ಗಾಯಗಳಾಗಿದ್ದವು. ಅಲ್ಲದೇ, ಮಿಸ್ತ್ರಿ ಅವರ ಎದೆಗೂಡಿಗೆ ಬಲವಾದ ಪೆಟ್ಟು ಬಿದ್ದಿತ್ತು ಎಂದು ಮುಂಬೈನ ಜೆ.ಜೆ.ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

‘ಅವರ ರಕ್ತನಾಳಗಳು ಛಿದ್ರಗೊಂಡಿದ್ದ ಕಾರಣ, ದೇಹದ ಒಳಗೂ ತೀವ್ರ ರಕ್ತಸ್ರಾವ ಆಗಿತ್ತು’ ಎಂದೂ ಅವರು ಹೇಳಿದ್ದಾರೆ.

ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ, ಅವರಿದ್ದ ಕಾರು ಪಾಲ್ಘರ್ ಜಿಲ್ಲೆಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಮಿಸ್ತ್ರಿ ಹಾಗೂ ಜಹಾಂಗೀರ್‌ ಅವರು ಮೃತಪಟ್ಟಿದ್ದರು.

ADVERTISEMENT

ಕಾರು ಚಲಾಯಿಸುತ್ತಿದ್ದ ವೈದ್ಯೆ ಅನಾಹಿತಾ ಪಾಂಡೋಲೆ ಹಾಗೂ ಪತಿ ಡೇರಿಯಸ್ ಪಾಂಡೋಲೆ ಅವರಿಗೆ ಗಾಯಗಳಾಗಿವೆ. ಅವರನ್ನು ಮುಂಬೈನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಇವರಿಗೆ ಮುಂಬೈನ ಸರ್‌ ಎಚ್‌.ಎನ್.ರಿಲಯನ್ಸ್ ಫೌಂಡೇಷನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

‘ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಂಡು, ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದ ನಂತರ ಶಸ್ತ್ರಚಿಕಿತ್ಸೆ ನೆರವೇರಿಸುವ ಬಗ್ಗೆ ವೈದ್ಯರ ತಂಡ ನಿರ್ಧಾರ ಕೈಗೊಳ್ಳುವುದು’ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಅನಾಹಿತಾ ಅವರ ಸೊಂಟದ ಮೂಳೆ ಮುರಿದಿದೆ. ಡೇರಿಯಸ್ ಅವರ ದವಡೆ ಮುರಿದಿದ್ದು, ಶ್ವಾಸನಾಳದಲ್ಲಿ ಅಡಚಣೆಯನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.