ADVERTISEMENT

ದಾಭೋಲ್ಕರ್‌ ಹತ್ಯೆ: ವಕೀಲ ಬಂಧನ

ಪಿಟಿಐ
Published 25 ಮೇ 2019, 18:37 IST
Last Updated 25 ಮೇ 2019, 18:37 IST
ನರೇಂದ್ರ ದಾಭೋಲ್ಕರ್
ನರೇಂದ್ರ ದಾಭೋಲ್ಕರ್   

ಪುಣೆ/ ಮುಂಬೈ:ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿಗಳ ಪರ ವಕೀಲ ಸಂಜೀವ ಪುನಾಲೆಕರ್‌ ಮತ್ತು ಸನಾತನ ಸಂಸ್ಥಾ ಸದಸ್ಯ ವಿಕ್ರಂ ಭಾವೆ ಅವರನ್ನು ಸಿಬಿಐ ಶನಿವಾರ ಬಂಧಿಸಿದೆ.

ಇಬ್ಬರನ್ನು ಮುಂಬೈನಲ್ಲಿ ಬಂಧಿಸಲಾಗಿದ್ದು, ಪುಣೆ ನ್ಯಾಯಾಲಯದಲ್ಲಿ ಭಾನುವಾರ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ದಾಭೋಲ್ಕರ್‌ ಅವರನ್ನು ಹತ್ಯೆಗೈದಿದ್ದಇಬ್ಬರ ಜತೆ ಪುನಾಲೆಕರ್‌ ಮತ್ತು ಭಾವೆ ಸಂಪರ್ಕ ಹೊಂದಿದ್ದರು ಎನ್ನುವುದುಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪುನಾಲೆಕರ್‌ ಸಹಾಯಕನಾಗಿ ಭಾವೆ ಕಾರ್ಯನಿರ್ವಹಿಸುತ್ತಿದ್ದ.

ADVERTISEMENT

2008ರಲ್ಲಿ ಠಾಣೆಯ ಗಡ್ಕರಿ ರಂಗಾಯಟನ್‌ನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಭಾವೆ, ಸದ್ಯ ಜಾಮೀನು ಪಡೆದುಕೊಂಡಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಭಾವೆ, ಮರಾಠಿಯಲ್ಲಿ ‘ಮಾಲೆಗಾಂವ್‌ ಸ್ಫೋಟಮಾಗಿಲ್ ಅದೃಶ್ಯ ಹಾತ್‌’ ಎನ್ನುವ ಪುಸ್ತಕವೊಂದನ್ನು ಬರೆದಿದ್ದಾನೆ.

ವಕೀಲ ಸಂಜೀವ ಪುನಾಲೆಕರ್‌ ಹಿಂದು ವಿಧಿದ್ನ್ಯಾಯಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ.

ಪುನಾಲೆಕರ್‌ ಬಂಧನಕ್ಕೆ ಸನಾತನ ಸಂಸ್ಥಾ ಪ್ರತಿಭಟನೆ ವ್ಯಕ್ತಪಡಿಸಿದೆ.

‘ಪುನಾಲೆಕರ್‌ ಅಮಾಯಕ. ಯಾವುದೇ ನಿರೀಕ್ಷೆಗಳಿಲ್ಲದೆ ರಾಷ್ಟ್ರ ಮತ್ತು ಧರ್ಮದ ಸೇವೆ ಮಾಡುತ್ತಿದ್ದರು. ಮಾಲೆಗಾಂವ್‌ ಸ್ಫೋಟ ಪ್ರಕರಣವು ಕೇಸರಿ ಭಯೋತ್ಪಾದನೆ ಸುಳ್ಳು ಎನ್ನುವುದನ್ನು ಪುನಾಲೆಕರ್‌ ಸಾಬೀತುಪಡಿಸಿದ್ದರು. ಜತೆಗೆ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್‌ ರಾಜಹಂಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.