ADVERTISEMENT

₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ 

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 3:34 IST
Last Updated 17 ಮಾರ್ಚ್ 2023, 3:34 IST
   

ನವದೆಹಲಿ: ಭಾರತೀಯ ನೌಕಾಪಡೆಗೆ ಹೆಚ್ಚುವರಿಯಾಗಿ ಬ್ರಹ್ಮೋಸ್‌ ಕ್ಷಿಪಣಿಗಳು ಹಾಗೂ ಸೇನೆಗೆ ಬೇಕಿರುವ ಸ್ವದೇಶಿ ನಿರ್ಮಿತ ಹೊವಿಟ್ಜರ್‌ ಫಿರಂಗಿಗಳು ಸೇರಿದಂತೆ ಒಟ್ಟು ₹70,500 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಗುರುವಾರ ಒಪ್ಪಿಗೆ ಸೂಚಿಸಿದೆ.

ಈ ಮೊತ್ತದಲ್ಲಿ ನೌಕಾಪಡೆಗೆ ಸಿಂಹಪಾಲು ದೊರೆತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ನೌಕಾಪ‍ಡೆಗೆ ಸಂಬಂಧಿಸಿದ ₹56,000 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಿದೆ. ಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೆಚ್ಚುವರಿಯಾಗಿ ಖರೀದಿಸುವುದರಿಂದ ನೌಕಾಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಾಗಲಿದೆ.

ದೇಶಿಯವಾಗಿ ಅಭಿವೃದ್ಧಿಪಡಿಸಿರುವ 155 ಎಂ.ಎಂ/52 ಕ್ಯಾಲಿಬರ್‌ನ ಅಡ್ವಾನ್ಸ್ಡ್‌ ಟೋವಡ್‌ ಆರ್ಟಿಲರಿ ಗನ್‌ ಸಿಸ್ಟಂ (ಎಟಿಎಜಿಎಸ್‌) ಖರೀದಿಗಾಗಿ ರಕ್ಷಣಾ ಸಚಿವಾಲಯವು ಸೇನೆಗೆ ಹಸಿರು ನಿಶಾನೆ ತೋರಿದೆ.

ADVERTISEMENT

ಎಚ್‌ಎಎಲ್‌ ನಿರ್ಮಿತ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ ಎಂಕೆ–3 ಖರೀದಿಸಲು ಕರಾವಳಿ ಕಾವಲು ಪಡೆಗೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.