ಸಾವು
(ಪ್ರಾತಿನಿಧಿಕ ಚಿತ್ರ)
ಚೆನ್ನೈ: ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಐ.ಟಿ ಉದ್ಯೋಗಿಯಾಗಿರುವ 27 ವರ್ಷದ ದಲಿತ ಯುವಕನನ್ನು ಆತನ ಸ್ನೇಹಿತೆಯ ಸಹೋದರ ಕೊಲೆ ಮಾಡಿದ್ದಾನೆ. ಭಾನುವಾರ ನಡೆದ ಈ ಕೃತ್ಯ ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿದೆ.
ಕೊಲೆ ಆರೋಪಿ, ಪ್ರಬಲ ಮರವರ್ ಸಮುದಾಯಕ್ಕೆ ಸೇರಿದ ಎಸ್. ಸುರ್ಜಿತ್ (24) ಪೊಲೀಸರಿಗೆ ಶರಣಾಗಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿದಂತೆ ಆತನ ಪೋಷಕರು- ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳಾದ ಸರವಣನ್ ಮತ್ತು ಕೃಷ್ಣಕುಮಾರಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಕೊಲೆಯಾಗಿರುವ ಕವಿನ್ ಸೆಲ್ವ ಗಣೇಶ್ ನೆರೆಯ ತೂತ್ತುಕುಡಿ ಜಿಲ್ಲೆಯ ಆರುಮುಗಮಂಗಲಂ ಮೂಲದವರಾಗಿದ್ದು, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇವರು ತಿರುನೆಲ್ವೇಲಿ ಪಟ್ಟಣದ ಕೆಟಿಸಿ ನಗರದಲ್ಲಿರುವ ಕ್ಲಿನಿಕ್‌ನಲ್ಲಿ ಸಿದ್ಧ ವೈದ್ಯೆಯಾಗಿ ಕೆಲಸ ಮಾಡುತ್ತಿರುವ ಎಸ್. ಸುಭಾಷಿಣಿ ಎಂಬವರನ್ನು ಪ್ರೀತಿಸುತ್ತಿದ್ದರು.
ಇವರು ಶಾಲಾ ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದರು. ಯುವತಿಯ ಕುಟುಂಬದ ತೀವ್ರ ವಿರೋಧದ ನಡುವೆಯೂ ಇವರ ಪ್ರೀತಿ ಮುಂದುವರಿದಿತ್ತು. ಕವಿನ್ ಭಾನುವಾರ ತಮ್ಮ ಸ್ನೇಹಿತೆಯನ್ನು ಭೇಟಿಯಾಗಲು ಕ್ಲಿನಿಕ್‌ಗೆ ಬಂದಿದ್ದರು. ಅಲ್ಲಿದ್ದ ಆಕೆಯ ಸಹೋದರ ಸುರ್ಜಿತ್, ‘ಹೆತ್ತವರು ನಿನ್ನ ಜತೆ ಮಾತನಾಡಲು ಬಯಸಿದ್ದಾರೆ’ ಎಂದು ಹೇಳಿ ಕವಿನ್ ಅವರನ್ನು ತನ್ನ ಜತೆ ಕರೆದೊಯ್ದಿದ್ದಾನೆ.
ಆದರೆ ಸುರ್ಜಿತ್ ತನ್ನ ದ್ವಿಚಕ್ರ ವಾಹನದಲ್ಲಿ ಏಕಾಂತ ಸ್ಥಳಕ್ಕೆ ಕರೆದೊಯ್ದು, ಕವಿನ್ ಜತೆ ಜಗಳ ಪ್ರಾರಂಭಿಸಿದ್ದಾನೆ. ಪ್ರಬಲ ಸಮುದಾಯದಿಂದ ಬಂದ ತನ್ನ ಅಕ್ಕನೊಂದಿಗೆ ಸಂಬಂಧ ಹೊಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ.
‘ಕವಿನ್ ಮುಖದ ಮೇಲೆ ಸುರ್ಜಿತ್ ಖಾರದ ಪುಡಿ ಎರಚಿದ್ದಾನೆ. ಕವಿನ್ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆದರೆ ಸುರ್ಜಿತ್ ಬೆನ್ನಟ್ಟಿಕೊಂಡು ಬಂದು ಹೊಡೆದು ಕೊಲೆ ಮಾಡಿದ್ದಾನೆ’ ಎಂದು ಕವಿನ್ ಅವರ ತಾಯಿ ಎಸ್. ತಮಿಳ್‌ಸೆಲ್ವಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಗಳೊಂದಿಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಯುವತಿಯ ಪೋಷಕರು ಈ ಹಿಂದೆ ತನ್ನ ಮಗನಿಗೆ ಬೆದರಿಕೆ ಹಾಕಿದ್ದರು ಎಂದು ಅವರು ಹೇಳಿದ್ದಾರೆ.
ಕವಿನ್ ಹೆತ್ತವರು, ಕೊಲೆಗೆ ಸಬ್ಇನ್ಸ್‌ಪೆಕ್ಟರ್ ದಂಪತಿಯ ಮೇಲೆಯೇ ನೇರ ಹೊಣೆ ಹೊರಿಸಿದ್ದಾರೆ. ‘ಅವರ ಬೆಂಬಲವಿಲ್ಲದೆ ಮಗ ಇಂತಹ ಕೃತ್ಯ ಎಸಗುತ್ತಿರಲಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.