ಮುಂಬೈ: ಪುಣೆ ಮೂಲದ ಶಿಕ್ಷಣ ಸಂಸ್ಥೆಯೊಂದು ದಲಿತ ಸಮುದಾಯಕ್ಕೆ ಸೇರಿದ ತನ್ನ ಮಾಜಿ ವಿದ್ಯಾರ್ಥಿಯ ವಿರುದ್ಧ ಜಾತಿ ತಾರತಮ್ಯ ಎಸಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಷಯವು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರೇಮವರ್ಧನ್ ಬಿರ್‍ಹಾಡೆ ಹೆಸರಿನ ವಿದ್ಯಾರ್ಥಿ ಪುಣೆಯ ಮಾಡರ್ನ್ ಕಾಲೇಜ್ ಆಫ್ ಆರ್ಟ್ಸ್‌ನಲ್ಲಿ 2024ರಲ್ಲಿ ಬಿಬಿಎ ಪೂರೈಸಿದ ಬಳಿಕ ಇಂಗ್ಲೆಂಡ್‌ನ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಕ್ಕಿದರೂ, ಪುಣೆಯ ಕಾಲೇಜಿನವರು ಸೂಕ್ತ ಸಮಯದಲ್ಲಿ ವ್ಯಾಸಂಗ ದೃಢೀಕರಣ ಪತ್ರ ನೀಡದ ಕಾರಣ ಉದ್ಯೋಗ ಕಳೆದುಕೊಳ್ಳಬೇಕಾಯಿತು ಎಂದು ಬಿರ್‍ಹಾಡೆ ಆರೋಪಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಮಹಾ ವಿಕಾಸ ಆಘಾಡಿ ಮೈತ್ರಿಕೂಟವು ಆಡಳಿತಾರೂಢ ಮಹಾಯುತಿ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಆದರೆ, ಮಾಡರ್ನ್ ಕಾಲೇಜಿನ ಪ್ರಾಂಶುಪಾಲರಾದ ನಿವೇದಿತಾ ಗಜಾನನ ಏಕಬೋಟೆ ಅವರು ಈ ಆರೋಪ ಅಲ್ಲಗಳೆದಿದ್ದು, ಲಂಡನ್‌ನಲ್ಲಿ ನೆಲಸಿರುವ ಬಿರ್‍ಹಾಡೆ ಆವರ ಆಶಿಸ್ತಿನ ಬಗ್ಗೆ ಉಲ್ಲೇಖಿಸಿದ್ದಾರೆ.
ವಂಚಿತ್ ಬಹುಜನ ಆಘಾಡಿ ಪಕ್ಷದ ಸ್ಥಾಪಕ, ಮಾಜಿ ಸಂಸದ ಪ್ರಕಾಶ್ ಅಂಬೇಡ್ಕರ್ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.
‘ಪ್ರತಿಷ್ಠಿತ ಸಸೆಕ್ಸ್ ವಿಶ್ವವಿದ್ಯಾಲಯದಿಂದ ಈಚೆಗೆ ಪದವಿ ಪಡೆದ ಯುವ ದಲಿತ ವಿದ್ಯಾರ್ಥಿ ಬಿರ್‍ಹಾಡೆ, ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಕಷ್ಟಪಟ್ಟು ಸಂಪಾದಿಸಿದ ಉದ್ಯೋಗಾವಕಾಶ ಕಳೆದುಕೊಳ್ಳಬೇಕಾಯಿತು. ಪುಣೆಯ ಮಾಡರ್ನ್ ಕಾಲೇಜು ಅವರ ಶೈಕ್ಷಣಿಕ ದೃಢೀಕರಣ ಪತ್ರ ನೀಡಲು ನಿರಾಕರಿಸಿದೆ. ಬಿರ್‍ಹಾಡೆ ಅವರೊಬ್ಬ ದಲಿತ ಎಂಬುದೇ ಇದಕ್ಕೆ ಕಾರಣ’ ಎಂದು ಪ್ರಕಾಶ್ ಆರೋಪಿಸಿದ್ದಾರೆ.
‘ಕಾಲೇಜಿನ ಪ್ರಾಂಶುಪಾಲರಾದ ಏಕಬೋಟೆ, ಬಿಜೆಪಿಯ ಯುವ ಸಂಘಟನೆ ಭಾರತೀಯ ಜನತಾ ಯುವ ಮೋರ್ಚಾದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮನುವಾದಿ ಬಿಜೆಪಿಯ ಪರ ಕೆಲಸ ಮಾಡುವ ಅವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ವಿರುದ್ಧ ಯಾವ ರೀತಿ ಜಾತಿ ತಾರತಮ್ಯ ತೋರಿರಬಹುದು ಎಂಬುದನ್ನು ನಿಮಗೆ ಊಹಿಸಬಹುದು’ ಎಂದಿದ್ದಾರೆ.
ವಿದ್ಯಾರ್ಥಿಯ ಆರೋಪ ಅಲ್ಲಗಳೆದಿರುವ ಏಕಬೋಟೆ, ‘ಬಿರ್‍ಹಾಡೆ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಸುಳ್ಳು, ದಾರಿತಪ್ಪಿಸುವ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕಾಲೇಜು, ಅದರ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಘನತೆಗೆ ಕುಂದು ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.