ADVERTISEMENT

ಉತ್ತರ ಪ್ರದೇಶ: ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಪಿಟಿಐ
Published 11 ಅಕ್ಟೋಬರ್ 2021, 6:50 IST
Last Updated 11 ಅಕ್ಟೋಬರ್ 2021, 6:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನೊಯ್ಡಾ: ಉತ್ತರ ಪ್ರದೇಶದ ಜೇವರ್ ಪ್ರದೇಶದಲ್ಲಿ ಮಧ್ಯ ವಯಸ್ಸಿನ ದಲಿತ ಮಹಿಳೆಯ ಮೇಲೆ ಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಭಾನುವಾರ ಬೆಳಿಗ್ಗೆ ಜಾನುವಾರುಗಳಿಗೆ ಹುಲ್ಲು ತರುವುದಕ್ಕಾಗಿ ಗ್ರಾಮದಿಂದ ಹೊರಗೆ ಹೋಗಿದ್ದಾಗ, ಪ್ರಕರಣದ ಪ್ರಮುಖ ಆರೋಪಿಯು ಜಾನುವಾರುಗಳನ್ನು ಮೇಯಿಸಲು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದಾನೆ. ಆಗ ಈ ದೃಷ್ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ.

ಡಿಸಿಪಿ (ಮಹಿಳಾ ಮತ್ತು ಮಕ್ಕಳ ಸುರಕ್ಷತೆ ವಿಭಾಗ) ವೃಂದಾ ಶುಕ್ಲಾ, ‘ಭಾನುವಾರ ಬೆಳಿಗ್ಗೆ 9.30 ಯಿಂದ 10.30 ಗಂಟೆಯೊಳಗೆ ಗ್ರಾಮದ ಸಮೀಪದ ಬಯಲು ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಹಳ್ಳಿಯವರಾಗಿದ್ದು, ಪರಸ್ಪರ ಪರಿಚಿತರು. ಜಾನುವಾರುಗಳಿಗೆ ಮೇವು ತರಲು ಮತ್ತು ಅವುಗಳನ್ನು ಮೇಯಿಸಲು ಇಬ್ಬರೂ ಪ್ರತಿ ನಿತ್ಯ ಈ ಜಾಗಕ್ಕೆ ಬರುತ್ತಿದ್ದರು‘ ಎಂದು ಹೇಳಿದ್ದಾರೆ.

ಪ್ರಮುಖ ಆರೋಪಿ ಮಾದಕ ವ್ಯಸನಿಯಾಗಿದ್ದು, ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಇತರ ಜನರ ಪಾತ್ರವಿರುವ ಕುರಿತು ತನಿಖೆಯ ನಂತರ ಖಚಿತಪಡಿಸಲಾಗುವುದು. ಪ್ರಮುಖ ಆರೋಪಿಯು ಪರಾರಿಯಾಗಿದ್ದಾನೆ. ಅವನನ್ನು ಬಂಧಿಸಿದ ನಂತರ ಇತರೆ ವಿಚಾರಗಳನ್ನು ಖಚಿತಪಡಿಸಬಹುದು‘ ಎಂದು ಸಿಪಿ ಶುಕ್ಲಾ ಹೇಳಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಿಸಿಪಿ ಶುಕ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.