ADVERTISEMENT

ರಾಹುಲ್‌ ಗಾಂಧಿ ದಾರಿ ತಪ್ಪಿದ ಗೂಳಿ: ಕೇಂದ್ರ ಸಚಿವ ರಾವ್‌ಸಾಹೇಬ್‌ ದಾನವೆ

ಪಿಟಿಐ
Published 21 ಆಗಸ್ಟ್ 2021, 11:50 IST
Last Updated 21 ಆಗಸ್ಟ್ 2021, 11:50 IST
ರಾವ್‌ಸಾಹೇಬ್‌ ದಾನವೆ
ರಾವ್‌ಸಾಹೇಬ್‌ ದಾನವೆ   

ಮುಂಬೈ: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಿಡಾಡಿ ಗೂಳಿ ಇದ್ದಂತೆ. ಅವರು ಯಾರಿಗೂ ಉಪಯೋಗಕ್ಕೆ ಬಾರದವರು’ ಎಂದು ಕೇಂದ್ರ ಸಚಿವ ರಾವ್‌ಸಾಹೇಬ್‌ ದಾನವೆ ಅವರು ಟೀಕಿಸಿದ್ದಾರೆ.

ಈ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾವ್‌ಸಾಹೇಬ್‌ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವತ್‌ ಕರಡ್‌ ಅವರು ಆಯೋಜಿಸಿದ್ದ ‘ಜನ ಆರ್ಶೀವಾದ ಯಾತ್ರೆ’ಯಲ್ಲಿ ಮಾತನಾಡಿದ ರಾವ್‌ಸಾಹೇಬ್‌ ಅವರು, ’ನಾನು 20 ವರ್ಷದಿಂದ ಲೋಕಸಭಾ ಸದಸ್ಯನಾಗಿದ್ದೇನೆ. ರಾಹುಲ್‌ ಗಾಂಧಿ ಅವರ ಕೆಲಸಗಳನ್ನು ನೋಡಿದ್ದೇನೆ. ರಾಹುಲ್‌ ಗಾಂಧಿ ದೇವರಿಗೆ ಸಮರ್ಪಿಸಿದ ಗೂಳಿಯಂತೆ. ಅವರು ಊರೆಲ್ಲಾ ಓಡಾಡುತ್ತಾರೆ. ಆದರೆ ಯಾರಿಗೂ ಉಪಯೋಗಕ್ಕೆ ಬರಲ್ಲ’ ಎಂದಿದ್ದಾರೆ.

ADVERTISEMENT

‘ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಮತ್ತು ದೇಶದ ಹಲವು ಭಾಗಗಳಲ್ಲಿ ಹೊಸದಾಗಿ ಜನಿಸಿದ ಗಂಡು ಕರುಗಳನ್ನು ಸ್ಥಳೀಯ ದೇವರಿಗೆ ಸಮರ್ಪಿಸುವ ಸಂಪ್ರದಾಯವಿದೆ. ಅಂತಹ ಗೂಳಿಯನ್ನು ಕೃಷಿ ಚಟುವಟಿಕೆಗೆ ಅಥವಾ ಬೇರೆ ಯಾವುದೇ ಕಾರ್ಯಕ್ಕೂ ಬಳಸುವುದಿಲ್ಲ. ಒಂದು ವೇಳೆ, ಆ ಗೂಳಿ ಹೊಲಕ್ಕೆ ನುಗ್ಗಿ, ಬೆಳೆಯನ್ನೂ ತಿಂದರೂ, ಅದನ್ನುರೈತರನ್ನು ಕ್ಷಮಿಸುತ್ತಾರೆ’ ಎಂದು ಹೇಳಿದ್ದಾರೆ.

‘ನೀವು ಪ್ರಧಾನಿ ನರೇಂದ್ರ ಮೋದಿ ಕೆಲಸಗಳನ್ನು ನೋಡಿ. ರೈಲ್ವೆ ಇಲಾಖೆಗೆ ಆದಾಯವನ್ನು ಗಳಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಸರ್ಕಾರ ತನ್ನ ಬೊಕ್ಕಸದಿಂದ ಅದರ ಅಭಿವೃದ್ಧಿಗಾಗಿ ಹಣ ಖರ್ಚು ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆಯನ್ನು ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು ಖಂಡಿಸಿದ್ದಾರೆ.

‘ರಾವ್‌ಸಾಹೇಬ್‌ ಎಲ್ಲಾ ಮಿತಿಯನ್ನು ಮೀರಿದ್ದಾರೆ. ಅವರ ಹೇಳಿಕೆಗಳು ಅಸಭ್ಯ ಮತ್ತು ಆಘಾತಕಾರಿಯಾಗಿದೆ. ರಾಹುಲ್‌ ಗಾಂಧಿ ವಿರುದ್ಧ ಅಸಭ್ಯ ಭಾಷೆಯನ್ನು ಬಳಸಿದ್ದಕ್ಕಾಗಿ ಅವರನ್ನು ಸಚಿವ ಸಂಪುಟದಿಂದ ತೆಗೆಯಬೇಕು. ಈ ರೀತಿಯ ಹೇಳಿಕೆಗಳನ್ನು ಅವರು ಹಲವು ಬಾರಿ ನೀಡಿದ್ದಾರೆ. ಹಾಗಿದ್ದರೂ, ಅವರಿಗೆ ಏಕೆ ಸಂಪುಟದಲ್ಲಿ ಸ್ಥಾನ ನೀಡಲಾಯಿತು ಎಂಬುದು ತಿಳಿಯುತ್ತಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.