ADVERTISEMENT

ಡಾರ್ಜಿಲಿಂಗ್‌ನಲ್ಲಿ ಭೂಕುಸಿತ, ಪ್ರವಾಹ: ಮೃತರ ಸಂಖ್ಯೆ 28ಕ್ಕೆ ಏರಿಕೆ

ರಕ್ಷಣಾ ಕಾರ್ಯಾಚರಣೆ ಸೋಮವಾರವೂ ಮುಂದುವರಿಕೆ l ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ

ಪಿಟಿಐ
Published 6 ಅಕ್ಟೋಬರ್ 2025, 23:30 IST
Last Updated 6 ಅಕ್ಟೋಬರ್ 2025, 23:30 IST
<div class="paragraphs"><p>ಡಾರ್ಜಿಲಿಂಗ್‌ನಲ್ಲಿ ಉಂಟಾದ ಭೂಕುಸಿತದಿಂದಾಗಿ ದುಧಿಯಾ ಕಬ್ಬಿಣ ಸೇತುವೆಗೆ ಹಾನಿಯಾಗಿದೆ </p></div>

ಡಾರ್ಜಿಲಿಂಗ್‌ನಲ್ಲಿ ಉಂಟಾದ ಭೂಕುಸಿತದಿಂದಾಗಿ ದುಧಿಯಾ ಕಬ್ಬಿಣ ಸೇತುವೆಗೆ ಹಾನಿಯಾಗಿದೆ

   

ಪಿಟಿಐ ಚಿತ್ರ

ಡಾರ್ಜಿಲಿಂಗ್‌/ಸಿಲಿಗುರಿ/ಕೋಲ್ಕತ್ತ/ನಾಗರಾಕಾಟಾ: ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ADVERTISEMENT

ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಸೋಮವಾರವೂ ಮುಂದುವರಿಸಿದ್ದಾರೆ. ಅನೇಕರು ನಾಪತ್ತೆಯಾಗಿದ್ದು, ಸಾವಿರಾರು ಜನರು ವಿವಿಧ ಪ್ರದೇಶಗಳಲ್ಲಿ ಸಿಲುಕಿದ್ದಾರೆ.

ಡಾರ್ಜಿಲಿಂಗ್‌ ಜಿಲ್ಲೆಯ ಮಿರಿಕ್‌, ಸುಖಿಯಾಪೋಖರಿ, ಜೋರೊಬಂಗಲೊ, ಜಲಪೈಗುರಿ ಜಿಲ್ಲೆಯ ನಾಗರಾಕಾಟಾ ಪ್ರದೇಶದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಮಣ್ಣು ಮತ್ತು ಅವಶೇಷಗಳಡಿ ಸಿಲುಕಿರುವವರಿಗಾಗಿ ಯಂತ್ರೋಪಕರಣಗಳನ್ನು ಬಳಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಭೂಕುಸಿತ ಸಂಭವಿಸಿದ 40ಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮಿರಿಕ್‌–ಡಾರ್ಜಿಲಿಂಗ್‌ ಹಾಗೂ ಸುಖಿಯಾಪೋಖರಿ ರಸ್ತೆಗಳನ್ನು ಸಂಚಾರಮುಕ್ತಗೊಳಿಸಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತ (ಜಿಟಿಎ) ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತವು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಸಂತ್ರಸ್ತರಿಗೆ ಆಹಾರ, ಔಷಧ, ಕುಡಿಯುವ ನೀರು, ಹೊದಿಕೆ ಸೇರಿದಂತೆ ಅಗತ್ಯ ನೆರವು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

‘ಭೂಕುಸಿತದಿಂದಾಗಿ ಸೇತುವೆಗಳು ಕುಸಿದಿವೆ. ರಸ್ತೆಗಳಲ್ಲಿ ಭಾರಿ ಪ್ರಮಾಣದ ಮಣ್ಣು ಆವರಿಸಿದ್ದು, ವಾಹನ ಸಂಚಾರ ಕಡಿತಗೊಂಡಿದೆ. ಹಳ್ಳಿಗಳಿಗೆ ತಲುಪಲು ಹೆಲಿಕಾಪ್ಟರ್‌ಗಳ ಅಗತ್ಯವಿದೆ’ ಎಂದು ಜಿಟಿಎ ಅಧಿಕಾರಿ ತಿಳಿಸಿದ್ದಾರೆ.

ಸಿಲಿಗುರಿಗೆ ತೆರಳುವ ರಸ್ತೆಗಳು ಬಂದ್‌ ಆಗಿರುವುದರಿಂದ ದುರ್ಗಾ ಪೂಜೆಗೆಂದು ಬೆಟ್ಟಕ್ಕೆ ತೆರಳಿದ್ದ ನೂರಾರು ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಪರ್ಯಾಯ ಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ.

ಭೂಕುಸಿತ, ಪ್ರವಾಹದಿಂದಾಗಿ ದೋರ್ಸ್‌ ಪ್ರದೇಶದಲ್ಲಿ ಏಳು ವನ್ಯಜೀವಿಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡಾರ್ಜಿಲಿಂಗ್‌ ಜಿಲ್ಲೆಯ ಮಿರಿಕ್‌ ಪ್ರದೇಶದಲ್ಲಿ ಉಂಟಾದ ಭೂಕುಸಿತದಿಂದಾಗಿ ಮನೆಗಳಿಗೆ ಹಾನಿಯಾಗಿದೆ

ದುರಂತದಲ್ಲಿ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ ಹಾಗೂ ಒಬ್ಬ ಸದಸ್ಯರಿಗೆ ಗೃಹರಕ್ಷಕ ಕೆಲಸ ನೀಡಲಾಗುವುದು
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ
ಪರಿಸ್ಥಿತಿಯು ಅತ್ಯಂತ ಸವಾಲಿನಿಂದ ಕೂಡಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ
ಉದಯನ್ ಗುಹಾ ಉತ್ತರ ಬಂಗಾಳ ಅಭಿವೃದ್ಧಿ ಸಚಿವ

‘ಮಾನವ ನಿರ್ಮಿತ ಪ್ರಾಕೃತಿಕ ವಿಕೋಪ’: ಪರಿಸರವಾದಿ ಸುಜಿತ್ ರಹಾ

ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೂಕುಸಿತವು ‘ಮಾನವ ನಿರ್ಮಿತ ಪ್ರಾಕೃತಿಕ ವಿಕೋಪ’ ಎಂದು  ಪರಿಸರವಾದಿಗಳು ಹೇಳಿದ್ದಾರೆ. ‘ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಡಾರ್ಜಿಲಿಂಗ್ ಬೆಟ್ಟಗಳು ಈಗ ಪ್ರಾಕೃತಿಕ ವಿಕೋಪದ ಕೂಪಗಳಾಗಿ ಬದಲಾಗಿವೆ. ದಶಕಗಳ ನಿರ್ಲಕ್ಷ್ಯಕ್ಕೆ ಬೆಟ್ಟಗಳು ಬೆಲೆ ತೆರುತ್ತಿವೆ. ಅರಣ್ಯನಾಶ ಯೋಜಿತವಲ್ಲದ ರಸ್ತೆಗಳು ಮತ್ತು ಅಕ್ರಮ ನಿರ್ಮಾಣ ಚಟುವಟಿಕೆಗಳು ಭೂಪ್ರದೇಶವನ್ನು ಅಸ್ಥಿರಗೊಳಿಸಿವೆ. ಇಲ್ಲಿ ಮಳೆ ನೆಪ ಮಾತ್ರ. ನಿಜವಾದ ಕಾರಣ ನಾವು ಪರ್ವತಗಳನ್ನು ಹೇಗೆ ನಡೆಸಿಕೊಂಡಿದ್ದೇವೆ ಎಂಬುದು’ ಎಂದು ಉತ್ತರ ಬಂಗಾಳ ವಿಜ್ಞಾನ ಕೇಂದ್ರದ ಸದಸ್ಯ ಪರಿಸರವಾದಿ ಸುಜಿತ್ ರಹಾ ಹೇಳಿದ್ದಾರೆ. ‘ಇಂತಹ ವಿಪತ್ತುಗಳನ್ನು ನಿಭಾಯಿಸಲು ಸರಿಯಾದ ವಿಪತ್ತು ನಿರ್ವಹಣಾ ಯೋಜನೆ ಜಾರಿಯಲ್ಲಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇದನ್ನು ವರ್ಷಕ್ಕೊಮ್ಮೆ ಸಂಭವಿಸುವ ದುರಂತವೆಂದು ಪರಿಗಣಿಸಬಾರದು’ ಎಂದಿದ್ದಾರೆ. ‘ಅನಿಯಂತ್ರಿತ ನಗರ ಬೆಳವಣಿಗೆ ಕಳಪೆ ಒಳಚರಂಡಿ ವ್ಯವಸ್ಥೆಗಳು ಮತ್ತು ಬೆಟ್ಟಗಳನ್ನು ಕತ್ತರಿಸುವುದು ಡಾರ್ಜಿಲಿಂಗ್‌ನ ಪರಿಸರ ವ್ಯವಸ್ಥೆಯನ್ನು ಗುರುತಿಸಲಾಗದಷ್ಟು ಬದಲಾಯಿಸಿವೆ’ ಎಂದು ಹೇಳಿದ್ದಾರೆ. ‘ಗಿರಿಗಳ ರಾಣಿ’ಯು ವಿಪತ್ತು ವಲಯವಾಗಿ ಬದಲಾಗುವುದನ್ನು ತಡೆಯಲು ವಿಕೇಂದ್ರೀಕೃತ ವಿಪತ್ತು ಯೋಜನೆ ನಿರ್ಮಾಣ ಚಟುವಟಿಕೆ ಮಾನದಂಡಗಳ ಕಟ್ಟುನಿಟ್ಟಿನ ಜಾರಿ ಹವಾಮಾನ ಬದಲಾವಣೆಯನ್ನು ಆಧರಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಮುರ್ಮು, ಘೋಷ್‌ ಮೇಲೆ ದಾಳಿ

ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ ಜಲಪೈಗುರಿ ಜಿಲ್ಲೆಯ ನಾಗರಾಕಾಟಾದ ದೋರ್ಸ್‌ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿದ ಬಿಜೆಪಿ ಸಂಸದ ಖಗೇನ್‌ ಮುರ್ಮು ಹಾಗೂ ಶಾಸಕ ಶಂಕರ್‌ ಘೋಷ್‌ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಈ ಘಟನೆಯು ‘ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಜಂಗಲ್‌ ರಾಜ್‌’ಗೆ ಮತ್ತೊಂದು ಉದಾಹರಣೆ’ ಎಂದು ಬಿಜೆಪಿ ಆರೋಪಿಸಿದೆ. ‘ಜನರನ್ನು ಪ್ರಚೋದಿಸುವ ಕೇಸರಿ ಶಿಬಿರದವರು ಫೋಟೊಗೆ ಪೋಸ್‌ ಕೊಡಲೆಂದು ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ’ ಎಂದು ಟಿಎಂಸಿ ತಿರುಗೇಟು ನೀಡಿದೆ. ದೋರ್ಸ್‌ ಪ್ರದೇಶದಲ್ಲಿನ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯವನ್ನು ಪರಿಶೀಲಿಸಲೆಂದು ಮುರ್ಮು ಘೋಷ್‌ ಸೇರಿದಂತೆ ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಪ್ರವಾಹಪೀಡಿತ ಜನರೊಂದಿಗೆ ಚರ್ಚಿಸುವ ಮೊದಲು ಗುಂಪೊಂದು ಸುತ್ತುವರಿದು ‘ದೀದಿ ದೀದಿ’ ಎಂದು ಘೋಷಣೆಗಳನ್ನು ಮೊಳಗಿಸಿತು. ಬಾಮನಡಂಗ ಬಳಿ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಿಂದ ವಾಹನದ ಗಾಜು ಒಡೆದಿದ್ದು ಮುರ್ಮು ಅವರ ತಲೆಗೆ ಪೆಟ್ಟು ಬಿದ್ದು ರಕ್ತ ಬಂದಿದೆ. ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದ ಘೋಷ್‌ ‘ಇದು ಭಯಾನಕ ದಾಳಿ’ ಎಂದು ಕರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.