
ನವದೆಹಲಿ: ‘ರಾಷ್ಟ್ರಧ್ವಜ, ಸಂವಿಧಾನದ ಮೌಲ್ಯ ಹಾಗೂ ದೇಶದ ಪ್ರಾಚೀನ ಪರಂಪರೆಯ ಆಧ್ಯಾತ್ಮಿಕ ಸಾರ ರಕ್ಷಿಸಲು ಜನರು ಮುಂದಾಗಬೇಕು’ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮನವಿ ಮಾಡಿದರು.
ಗಣರಾಜ್ಯೋತ್ಸವದ ಅಂಗವಾಗಿ ಕೇಶವಕುಂಜದಲ್ಲಿ(ಆರ್‌ಎಸ್‌ಎಸ್ ಕಚೇರಿ) ಸೋಮವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ದೇಶದ ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ, ರಾಷ್ಟ್ರೀಯ ಕರ್ತವ್ಯ ಪಾಲಿಸುವುದಾಗಿ ಪ್ರತಿಜ್ಞೆ ಮಾಡಬೇಕು’ ಎಂದು ಕೋರಿದರು.
‘ಸಮಾಜ ಹಾಗೂ ದುರ್ಬಲರ ಬಗ್ಗೆ ಪ್ರೀತಿ, ಸಹಾನುಭೂತಿ ಬೆಳೆಸಿಕೊಳ್ಳಬೇಕು. ಗಣರಾಜ್ಯದ ರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು’ ಎಂದೂ ಮನವಿ ಮಾಡಿದರು.
ರಾಷ್ಟ್ರಧರ್ಮದಿಂದ ಸ್ಫೂರ್ತಿ ಪಡೆದಿರುವ ಆರ್‌ಎಸ್‌ಎಸ್‌ನ ಸ್ವಯಂಸೇವಕರು ಶತಮಾನದಿಂದಲೂ ಗಣರಾಜ್ಯ ರಕ್ಷಣೆ, ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
‘ವಂದೇ ಮಾತರಂ ನಮ್ಮ ರಾಷ್ಟ್ರೀಯ ಹಾಡು. ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆ ನೀಡಿದ ಗೀತೆ. ಭವಿಷ್ಯದ ಪೀಳಿಗೆಗೂ ಸ್ಫೂರ್ತಿ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಲಾಯಿತು. ನಾಗ್ಪುರ ಮಹಾನಗರ ಸಂಘಚಾಲಕ ರಾಜೇಶ್ ಲೋಯ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ರೇಶಿಂಭಾಗ್ ಪ್ರದೇಶದಲ್ಲಿರುವ ಡಾ. ಹೆಡ್ಗೆವಾರ್ ಸ್ಮೃತಿ ಮಂದಿರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಖಿಲ ಭಾರತೀಯ ಸೇವಾ ಪ್ರಮುಖ್ ಪರಾಗ್ ಅಭಿಯಂಕರ್ ರಾಷ್ಟ್ರಧ್ವಜ ಹಾರಿಸಿದರು. ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮುಜಾಫರ್‌ಪುರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.