ADVERTISEMENT

ಎಲ್‌ಇಟಿ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಹತ್ಯೆ

ಶ್ರೂನಗರದಲ್ಲಿ ಭದ್ರತಾಪಡೆಯಿಂದ ಎನ್‌ಕೌಂಟರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 22:07 IST
Last Updated 29 ಜೂನ್ 2021, 22:07 IST
ಶ್ರೀನಗರದ ಹೊರವಲಯದ ಮಾಲೂರಾದಲ್ಲಿ ಮಂಗಳವಾರ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಭಾಗಶಃ ಹಾನಿಗೊಳಗಾದ ಮನೆಯೊಳಗೆ ಗುಂಡುಗಳ ಗುರುತುಗಳನ್ನು ಸ್ಥಳೀಯರು ವೀಕ್ಷಿಸುತ್ತಿರುವುದು– ಪಿಟಿಐ ಚಿತ್ರ
ಶ್ರೀನಗರದ ಹೊರವಲಯದ ಮಾಲೂರಾದಲ್ಲಿ ಮಂಗಳವಾರ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಭಾಗಶಃ ಹಾನಿಗೊಳಗಾದ ಮನೆಯೊಳಗೆ ಗುಂಡುಗಳ ಗುರುತುಗಳನ್ನು ಸ್ಥಳೀಯರು ವೀಕ್ಷಿಸುತ್ತಿರುವುದು– ಪಿಟಿಐ ಚಿತ್ರ   

ಶ್ರೀನಗರ: ಶ್ರೀನಗರ ಹೊರವಲಯದಲ್ಲಿರುವ ಮಾಲೂರಾ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಕಮಾಂಡರ್ ಸೇರಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಎಲ್‌ಇಟಿ ಕಮಾಂಡರ್‌, ಪಾಕಿಸ್ತಾನದ ಉಗ್ರ ಅಬ್ರಾರ್‌ನನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲುವ ಮೊದಲು ಒಂದು ದಿನ ಮುಂಚಿತವಾಗಿ ಭದ್ರತಾಪಡೆ ಸಿಬ್ಬಂದಿ ಜೀವಂತವಾಗಿ ಸೆರೆ ಹಿಡಿದಿದ್ದರು.

ಪೋಲಿಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡವು ಮಾಲೂರಾದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಆರಂಭಿಸಿದ ನಂತರ ಸೋಮವಾರ ಸಂಜೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಹಾಯಕ ಕಮಾಂಡೆಂಟ್ ಮತ್ತು ಸಬ್ ಇನ್ಸ್‌ಪೆಕ್ಟರ್ ಸೇರಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ADVERTISEMENT

ಎನ್‌ಕೌಂಟರ್‌ನಲ್ಲಿ ಹತನಾಗಿರುವ ಉಗ್ರ ಅಬ್ರಾರ್‌ನನ್ನು ಹೆದ್ದಾರಿಯಲ್ಲಿ ನಾಕಾಬಂದಿ ಹೇರಿದ್ದಾಗ ಬಂಧಿಸಲಾಗಿತ್ತು. ಹೆದ್ದಾರಿಯ ಮೇಲೆ ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌‍ಪಿಎಫ್‌ ಯೋಧರು ಹೆದ್ದಾರಿಯಲ್ಲಿ ಜಂಟಿ ನಾಕಾಬಂದಿ ಹಾಕಿದ್ದರು ಎಂದು ಪೊಲೀಸ್‌ ವಕ್ತಾರರು ಹೇಳಿದ್ದಾರೆ.

‘ವಿಚಾರಣೆ ವೇಳೆ ಅಬ್ರಾರ್ ತನ್ನ ಎಕೆ 47 ರೈಫಲ್ ಅನ್ನು ಮಾಲೂರಾದಲ್ಲಿರುವ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಮಾಹಿತಿ ನೀಡಿದ್ದ. ಶಸ್ತ್ರಾಸ್ತ್ರಗಳನ್ನು ವಶಪಡಿಕೊಳ್ಳಲು ಭದ್ರತಾ ಪಡೆ ಸಿಬ್ಬಂದಿ ಆ ಮನೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಅಡಗಿದ್ದ ಅಬ್ರಾರ್‌ ಸಹಚರ ಮತ್ತೊಬ್ಬ ಉಗ್ರ ಮನೆಗೆ ಬೆಂಕಿ ಹಚ್ಚಿದ್ದು, ಭದ್ರತಾಪಡೆ ಸಿಬ್ಬಂದಿ ಬೆಂಕಿಗೆ ಸಿಲುಕಿದ್ದಾರೆ. ಆಗ ಅಬ್ರಾರ್‌ ತನ್ನ ಸಹಚರನೊಂದಿಗೆ ಅದೇ ಮನೆಯಲ್ಲಿ ಅವಿತುಕೊಂಡು ಭದ್ರತಾಪಡೆ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾಪಡೆ ನಡೆಸಿದ ಪ್ರತಿ ದಾಳಿಯಲ್ಲಿ ಅಬ್ರಾರ್‌ ಮತ್ತು ಆತನ ಸಹಚರ ವಿದೇಶಿ ಉಗ್ರ ಸ್ಥಳದಲ್ಲೇ ಹತರಾಗಿದ್ದಾರೆ. ಸ್ಥಳದಿಂದ ಎರಡು ಎಕೆ -47 ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಅಬ್ರಾರ್ ಅಲಿಯಾಸ್ ಖಾಲಿದ್ ಹಲವು ಹತ್ಯೆಗಳಲ್ಲಿ ಭಾಗಿಯಾಗಿದ್ದ. ಮಧ್ಯ ಕಾಶ್ಮೀರದ ಲಷ್ಕರ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 2018ರಿಂದ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಈತನ ಹತ್ಯೆ ದೊಡ್ಡ ಯಶಸ್ಸು ಎಂದು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.

ಪೋಲಿಸ್ ಮಾಹಿತಿ ಪ್ರಕಾರ, ಮಾರ್ಚ್‌ನಲ್ಲಿ ಲಾವಾಪೊರಾದಲ್ಲಿ ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ಅಬ್ರಾರ್ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದಾನೆ. ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದು, ರೈಫಲ್ ಅನ್ನು ಸಹ ಉಗ್ರರು ಕಸಿದುಕೊಂಡು ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.