ಪುರಿ (ಒಡಿಶಾ): ಸಾವಿರಾರು ಭಕ್ತರು ಸೋಮವಾರ ಇಲ್ಲಿಯ ಜಗನ್ನಾಥ ಹಾಗೂ ಶ್ರೀ ಗುಂಡಿಚಾ ದೇವರ ದರ್ಶನ ಪಡೆದರು. ಶ್ರೀ ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ವೇಳೆ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದರು. ಇದರಿಂದ ದೇವಾಲಯಗಳ ಬಳಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಜಗನ್ನಾಥ ದೇವರ ರಥಯಾತ್ರೆಗಾಗಿ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ.
ಗುಂಡಿಚಾ ದೇವಸ್ಥಾನದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರತಿಯಲ್ಲಿ ಸಾಗಿ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ತೊಂದರೆಯಿಲ್ಲದೆ ಸಾವಿರಾರು ಭಕ್ತರು ಬಲಭದ್ರ, ದೇವಿ ಸುಭದ್ರಾ ಮತ್ತು ಜಗನ್ನಾಥ ದೇವರ ದರ್ಶನ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ಧಾರ್ಮಿಕ ಆಚರಣೆ ನಡೆಸಬೇಕಿರುವುದರಿಂದ ಸೋಮವಾರ ರಾತ್ರಿ ದೇವಾಲಯದ ಬಾಗಿಲು ತೆರೆದಿರಲಿದ್ದು, ಭಕ್ತರ ದರ್ಶನಕ್ಕೆ ಮುಕ್ತವಾಗಿರುತ್ತದೆ. ಮಂಗಳವಾರ ಬೆಳಿಗ್ಗೆ ಮಂಗಳಾರತಿ ನಡೆಯಲಿದ್ದು ಯಾವುದೇ ಆತಂಕವಿಲ್ಲದೇ ಭಕ್ತರು ಭಾಗಿಯಾಗಬಹುದು. ಪ್ರಸಾದವನ್ನೂ ವಿತರಿಸಲಾಗುವುದು ಎಂದು ದೇವಸ್ಥಾನ ಮಂಡಳಿ ಅಧಿಕಾರಿಗಳು ತಿಳಿಸಿದರು.
ಕಾಲ್ತುಳಿತದ ಬಳಿಕ ಒಡಿಶಾ ಮುಖ್ಯಮಂತ್ರಿ ಅವರು ಭದ್ರತಾ ವ್ಯವಸ್ಥೆಯ ನಿರ್ವಹಣೆಗಾಗಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಿದ್ದಾರೆ.
ನಾವು ಎಚ್ಚರಿಕೆಯಿಂದ ಇದ್ದೇವೆ. ದೇವರ ದಯೆಯಿಂದ ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ಭಕ್ತರು ಯಾವುದೇ ಆತಂಕವಿಲ್ಲದೇ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ–ಸೌಮೇಂದ್ರ ಪ್ರಿಯದರ್ಶಿ ಐಪಿಎಸ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.