ADVERTISEMENT

ಕಾಶ್ಮೀರ– ಕನ್ಯಾಕುಮಾರಿ ನಡುವಿನ ರೈಲು ಸಂಪರ್ಕ ದಿನ ದೂರವಿಲ್ಲ: ಪ್ರಧಾನಿ ಮೋದಿ

ಪಿಟಿಐ
Published 20 ಫೆಬ್ರುವರಿ 2024, 16:09 IST
Last Updated 20 ಫೆಬ್ರುವರಿ 2024, 16:09 IST
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇತರರು ಪಾಲ್ಗೊಂಡಿದ್ದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್ ಸಿನ್ಹಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇತರರು ಪಾಲ್ಗೊಂಡಿದ್ದರು –ಪಿಟಿಐ ಚಿತ್ರ   

ಜಮ್ಮು: ‘ಕಾಶ್ಮೀರ– ಕನ್ಯಾಕುಮಾರಿ ನಡುವೆ ರೈಲು ಸಂಪರ್ಕ ಕಲ್ಪಿಸುವ ದಿನ ದೂರವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದರು.

ಉಧಂಪುರ– ಶ್ರೀನಗರ– ಬಾರಾಮುಲ್ಲಾ (ಯುಎಸ್‌ಬಿಆರ್‌ಎಲ್‌) ನಡುವಿನ 41.8 ಕಿ.ಮೀ. ಉದ್ದದ ರೈಲು ಸಂಪರ್ಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಒಟ್ಟು 272 ಕಿ.ಮೀ ಉದ್ದದ ಯುಎಸ್‌ಬಿಆರ್‌ಎಲ್‌ ರೈಲು ಮಾರ್ಗ ಯೋಜನೆಯನ್ನು ವಿವಿಧ ಹಂತಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2009ರ ಅಕ್ಟೋಬರ್‌ನಲ್ಲಿ 118 ಕಿ.ಮೀ ಉದ್ದದ ಖಾಜಿಗುಂಡ್‌– ಬಾರಾಮುಲ್ಲಾ ಮಾರ್ಗವನ್ನು, 2013ರ ಜೂನ್‌ನಲ್ಲಿ 18 ಕಿ.ಮೀ. ಉದ್ದದ ಬಾರಾಮುಲ್ಲಾ– ಖಾಜಿಗುಂಡ್‌ ಮಾರ್ಗವನ್ನು ಹಾಗೂ 2014ರ ಜುಲೈನಲ್ಲಿ 25 ಕಿ.ಮೀ. ಉಧಂಪುರ– ಕತ್ರಾ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಏಕಕಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ ದೇಶದ ಇತರೆ ಭಾಗಗಳು ಅಭಿವೃದ್ಧಿಯತ್ತ ಸಾಗುತ್ತಿದ್ದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿವೃದ್ಧಿ ಕಾಮಗಾರಿಗಳ ಲಾಭ ಸಿಗುತ್ತಿರಲಿಲ್ಲ ಅಥವಾ ಈ ಪ್ರದೇಶದಲ್ಲಿ ತುಂಬಾ ತಡವಾಗಿ ಕಾಮಗಾರಿಗಳು ನಡೆಯುತ್ತಿದ್ದವು’ ಎಂದು ಅವರು ಇಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಹೇಳಿದರು.

ADVERTISEMENT

‘ಇಂದು ದೇಶದಾದ್ಯಂತ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಈ ವಿಚಾರದಲ್ಲಿ ಜಮ್ಮು ಮತ್ತು ಕಾಶ್ಮೀರವೂ ಹಿಂದೆ ಉಳಿದಿಲ್ಲ. ಇಂದು ಜಮ್ಮು ಮತ್ತು ಕಾಶ್ಮೀರ ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ನಡೆಯುತ್ತಿದೆ’ ಎಂದೂ ಅವರು ಹೇಳಿದರು.

ಮಂಗಳವಾರ ನಡೆದ ವಿವಿಧ ಅಭಿವೃದ್ದಿ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.